Wednesday, August 26, 2009

ದೇಹ, ಸಾವು ಮತ್ತು ಆತ್ಮ...

ಜ್ಞಾನಿಗಳು ಹೇಳ್ತಾರೆ ಜೀರ್ಣವಾಗಿರೊ ದೇಹವನ್ನು ಆತ್ಮ ತೊರೆದು ಹೋಗುವುದೇ ಸಾವು ಅಂತ. ಆತ್ಮ ಚಿರಾಯು ಸಾವು ಇರುವುದು ದೇಹಕ್ಕೆ ಮಾತ್ರ ಅಂತಾನು ಹೆಳ್ತಾರೆ. ಅದೇನೆ ಇರಲಿ..

ನಾನೇಕೆ ಸಾವು, ಆತ್ಮ ಅಂತೆಲ್ಲ ಮಾತಾದ್ತಿಡಿನಿ ಅಂದ್ರೆ, ಕಳೆದ ಕೆಲವು ದಿನಗಳ ಹಿಂದೆ ನಮ್ಮಜ್ಜಿ ತೀರಿಹೋದರು.ಅದೇ ದಿನ ನನ್ನ ಅಕ್ಕನ ಗೆಳತಿಯ ಮಗನೂ ರಸ್ತೆ ಅಪಘಾತದಲ್ಲಿ ಕೊನೆಉಸಿರೆಳೆದಿದ್ದ. ನಮ್ಮಜ್ಜಿಗೆ ೮೩ ವರ್ಷ ಆಗಿತ್ತು. ದೇಹ ಜೀರ್ಣ ಆಗಿತ್ತು ಅಂದುಕೊಳ್ಳಿ. ಆದರೆ ಆ ಹುಡುಗನ ವಯಸ್ಸು ಕೇವಲ ೧೯! ಈ ಸಾವನ್ನು ಸಮರ್ಥಿಸಿಕೊಳ್ಳುವುದು ಹೇಗೆ? ೧೯ ವರ್ಷಕ್ಕೆ ದೇಹ ಜೀರ್ಣವಾಗಿತ್ತಾ?!

ದೇಹ ಜೀರ್ಣವಾಗಲು ಕೇವಲ ವಯಸ್ಸು ಮಾತ್ರ ಕಾರಣ ಅಲ್ಲ ಅಂತ ಅರ್ಥೈಸಿಕೊಳ್ಳಬಹುದೇ? ಅಪಘಾತದಿಂದಾಗಿ ಅವನ ದೇಹ ಜೀರ್ಣವಾಗಿ ಆತ್ಮ ತೊರೆದು ಹೋಯಿತೆ? ಆದರು ನನಗಿರುವ ದ್ವಂದ್ವ ಏನೆಂದರೆ, ದೇಹದ ದೆಸೆಯಿಂದಾಗಿ ಆತ್ಮ ದೇಹವನ್ನು ತೊರೆಯುವುದೋ ಅಥವಾ ಆತ್ಮದ ಇಚ್ಚೆಯಂತೆ ದೇಹವು ಜರ್ಜರಿತವಾಗುವುದೋ?

Thursday, August 20, 2009

ಭಾವನೆಗಳ ಲೀಲೆ

ಅವನೊಬ್ಬ ಸ್ತಿತಪ್ರಜ್ಞ. ಯಾರೇನೇ ಹೇಳಲಿ, "ಓಹೋ, ಹೌದಾ, ಖುಷಿಯಾಯ್ತು", ಅಥವಾ "ಅಯ್ಯೋ, ಹಾಗಾಗಬಾರದಿತ್ತು" ಎಂದು ಹೇಳುತ್ತಿದ್ದ. ಹಾಗಂತ ಭಾವನೆಗಳಿಲ್ಲ ಅಂತಲ್ಲ, ಆದರೆ, ಇಲ್ಲವೇ ಇಲ್ಲನೆನ್ನುವಷ್ಟು ಕಡಿಮೆ ವ್ಯಕ್ತಪಡಿಸುತ್ತಿದ್ದ. ಅವನು ಏನಾದರೂ ಚಿಂತಿಸುತ್ತಿದ್ದರೆ, ಅಥವಾ ಖುಷಿಯಾಗಿದ್ದರೆ, ಅವನು ಹೇಳಿದರೆ ಮಾತ್ರ ಬೇರೆಯವರಿಗೆ ಗೊತ್ತಾಗುತ್ತಿತ್ತು.

ಎಲ್ಲರ ಜೀವನದಂತೆ, ಅವನ ಜೀವನದಲ್ಲೂ ಒಂದು ಹೆಣ್ಣು ಜೀವದ ಪ್ರವೇಶವಾಯಿತು. ಅವಳು "ನೀನೊಬ್ಬ ಮುಚ್ಚಿದ ಶೀಷೆ, ಮುಚ್ಚಳ ತೆಗೆದಿಡು, ನಿನ್ನನ್ನು ನೀನು ತೆರೆದಿಡಬೇಕು" ಎಂದಳು. "ಹೃದಯ ಸುಗಂಧ ದ್ರವ್ಯದ ಶೀಷೆ, ಮುಚ್ಚಳ ತೆಗೆದರೆ, ಅದರ ಪರಿಮಳ ಹೊರಟು ಹೋಗುತ್ತದೆ" ಎಂದ. "ಆದರೂ ಸ್ವಲ್ಪ ಸ್ವಲ್ಪ ತೆಗೆಯುವೆ, ಇನ್ನುಮುಂದೆ" ಎಂದ.

ಕಾಲಕ್ರಮೇಣ, ಗೊತ್ತೇ ಆಗದಂತೆ, ಭಾವನೆಗಳಿಗೆ ತಕ್ಕಷ್ಟು ಸ್ಪಂದಿಸಲು ಆರಂಭಿಸಿದ. ಮುಂಚೆ ಕಥೆ - ಕಾದಂಬರಿಗಳನ್ನು, ನಿರ್ಲಿಪ್ತನಾಗಿ, ಕೇವಲ ಆಸಕ್ತಿ, ಕುತೂಹಲ ಮತ್ತು ಕಥೆ ಎನ್ನುವ ದೃಷ್ಟಿಯಿಂದ ಮಾತ್ರ ಓದುತ್ತಿದ್ದವ, ಆಮೇಲೆ ಭಾವಪರವಶನಾಗಿ ಓದಲಾರಂಭಿಸಿದ. ದೂರದರ್ಶನ, ಚಲನಚಿತ್ರಗಳಲ್ಲಿ ಅಳುವ ದೃಶ್ಯವಿದ್ದರೆ, ಇಲ್ಲಿ ಇವನ ಕೆನ್ನೆಯ ಮೇಲೆ ಕಣ್ಣೀರು ಧಾರಾಕಾರ ಬರಲಾರಂಭಿಸಿತು. ಭಾವನೆಗಳ ಚಿಲುಮೆಯಾದ. ಅವನ ಚಿಂತಿತನಾಗಿದ್ದಾನೋ, ಖುಷಿಯಾಗಿದ್ದಾನೋ, ಅವನ ಮಿತ್ರರು ಹೇಳಬಲ್ಲವರಾಗಿದ್ದರು!

- ಅವನು ಮುಂಚೆ ಇದ್ದಿದ್ದು ಸರಿಯೇ? ಅಥವಾ ಆಮೇಲೆ ಪರಿವರ್ತನೆಗೊಂಡಿದ್ದು ಸರಿಯೇ?
- ಅಥವಾ ಎರಡೂ ಸರಿಯೇ!? ಇದೆಲ್ಲದರ ಮಿಶ್ರಿಣವೇ ಮಾನವ ಜೀವನವೇ?
- ಮನುಷ್ಯ ಪರಿಪೂರ್ಣವಾಗುವಡೆಗೆ ಎಂದರೇ, ಭಾವನೆಗಳು ಕಾಲಕ್ರಮೇಣ ಕಡಿಮೆ ಆಗಬೇಕೆ? ಅಥವಾ ಜಾಸ್ತಿ ಆಗಬೇಕೆ?
- ಸನ್ಯಾಸಿಗಳನ್ನು (ಪ್ರಪಂಚದೆಡೆಗಿನ ಸಂಬಂಧ ಕಳಚಿಕೊಂಡವರು) "ಮಹಾನ್ ಸಾಧಕರು" ಎಂದು ಕರೆಯುವುದು ಎಷ್ಟು ಸರಿ, ಯಾಕೆಂದರೆ ಬೇರೆ ಎಲ್ಲಾ ಪ್ರಾಣಿಗಳಿಗಿಂತ ಮಾನವ ಉನ್ನತ ಪ್ರಾಣಿಯಾಗಿದ್ದು ಭಾವನಿಗಳಿಂದ, ಅದನ್ನೆ ತೊರೆದರೆ?
- ಅನುಭವವಿರುವವನು ಅನುಭವಿ ಆದರೆ, ಭಾವನೆ ಇರುವವನು ಭಾವಿ ಆಗ್ತಾನಾ?

ವಿ.ಸೂ. :- ಯಾರಾದರೂ, ಈ ಕಾಲ್ಪನಿಕ ಕಥೆಗೆ, ಆಮೇಲಿರಿಸಿದ ಪ್ರಶ್ನೆಗಳಿಗೆ ಏನಾದರೂ ಅರ್ಥವಿದೆ ಎಂದು ಭಾವಿಸಿದರೆ, ನನಗೆ ಅಚ್ಚರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. :-)

Monday, August 3, 2009

ಮನದ ಮಾತು...

August 2nd, 2009
ಪ್ರೀತಿಯ ಅಂಕುರಿಸಿ ಭಾವನೆಯ ಕವನವಾಗಿಸಿ
ಮುದನೀಡುವ ನಿನಗೆ ಹೇಳುವೆ ನಾನು ನಮನ

ಕನಸುಗಳ ಮೂಡಿಸಿ ಬದುಕ ಬೆಸೆಯುವ
ಇನಿಯನಿಗೆ ಕೋರುವೆ ಆಗಮನ

ಮನವ ಪುಳಕಿಸಿ ಆನಂದಿಸಿ ಬಾಳ ಪಯಣಕೆ
ಜೊತೆಯಾಗುವ ಸಂಗಾತಿಗೆ ಅರ್ಪಿಸುವೆ ಈ ಕವನ

ನಿನ್ನ ನೆನಪು..




My first poem, April 23rd,2009
ಮುಂಜಾವಿನ ಮಂಜಿನ ಮುಸುಕಿನಲಿ ಸೂರ್ಯನ
ಬೆಳಕಿಗೆಹೊಳೆಯುವ ಇಬ್ಬನಿಯಂತೆ ನಿನ್ನ ನೆನಪು ...

ಚೈತ್ರದ ಚಿಗುರಿಗೆ ಮೈದುಂಬಿ ಹಾಡುವ
ಹಕ್ಕಿಯಚಿಲಿಪಿಲಿ ದನಿಯಂತೆ ನಿನ್ನ ನೆನಪು ...

ಬೆಳದಿಂಗಳ ರಾತ್ರಿಯಲಿ ಮೈಚುಂಬಿಸುವ ತಂಗಾಳಿಯಲಿ
ತೇಲಿ ಬರುವ ಕಣಗಿಲೆ ಹೂವಿನ ಕಂಪಿನಂತೆ ನಿನ್ನ ನೆನಪು ...