Saturday, October 24, 2009

ದೀಪಾವಳಿಯ ಹಬ್ಬಾಡುವುದು ಮತ್ತು ಕೋಲಾಟ

"ಢುಮುಸಾsssಲ್ ಹೊಡಿರಣ್ಣ ಢುಮುಸಾsssಲ್ ಹೊಡಿರ್ರೊ"
"ಢುಮುಸಾsssಲ್ ಹೊಡಿರಣ್ಣ, ನಾವ್ ಹೋಗ ಮನೆಗೆsss" ...
...
"ಯದುಕುಲೇಸನೇsss, ಸ್ವಾಮಿ ಪರಸು ರಾಮನೇsss, ಸ್ವಾಮಿ ಪರಸು ರಾಮನೇsss"
...

ಇದೇನಂತ ಆಶ್ಚರ್ಯಗೊಳ್ತಾ ಇದೀರಾ? ಹಳ್ಳಿಗರಿಗೆ, ಅದರಲ್ಲೂ ಮಲೆನಾಡು ಸುತ್ತಮುತ್ತ ಅಂತೂ ಇದು ಏನು ಅಂತ ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ. ಆದರೂ ಚಿಕ್ಕದಾಗಿ ವಿವರಿಸುತ್ತೇನೆ. ಗ್ರಾಂಥಿಕ ಭಾಷೆಯಲ್ಲಿ "ಅಂಟಿಗೆ ಪಿಂಟಿಗೆ" ಎಂದು ಕರೆಯುವ ಈ ಕಲೆಗೆ ಮಲೆನಾಡಿನ ಹೃದಯ ಭಾಗವಾದ ಸಾಗರ ಪ್ರಾಂತ್ಯದ ಸುತ್ತಮುತ್ತ "ಹಬ್ಬಾಡುವುದು" ಎನ್ನುತ್ತೇವೆ. ಹಬ್ಬಾಡುವವರು ದೀಪ ಹಿಡಿದುಕೊಂಡು ಮೊದಲೆರಡು ಸಾಲಿನಂತೆ ಕೂಗುತ್ತ ಮನೆಮನೆಗೆ ಬರುತ್ತಾರೆ, ಬಂದು ಹಾಡು ಆರಂಭಿಸುತ್ತಾರೆ. ಮನೆಯವರು, ಹಬ್ಬಾಡುವವರ ದೀಪಕ್ಕೆ ಎಣ್ಣೆ ಹಾಕಿ, ಅವರ ದೀಪದಿಂದ ತಮ್ಮ ಮನೆಯ ದೇವರ ದೀಪ ಹಚ್ಚಿಕೊಳ್ಳುವುದು ನಮ್ಮಲ್ಲಿ ಇರುವ ಪದ್ಧತಿ. ಅವರಿಗೆ ಹಬ್ಬಕ್ಕೆ ಮಾಡಿದ ಹೋಳಿಗೆಯನ್ನಿತ್ತು, ಸಂಭಾವನೆ ನೀಡುತ್ತೇವೆ. (ಮನೆ ಒಳಗಡೆ ಬಲ್ಬ್ ಹಾಳಾಗಿದ್ದರಿಂದ, ಫೋಟೋ ಸರಿಯಾಗಿ ಬಂದಿಲ್ಲ, ಹಬ್ಬಾಡುವ ಗುಂಪು ಹೊರಗಡೆ ಹಾಡು ಹೇಳುತ್ತಿದ್ದರು, ಅವರೆಲ್ಲ ಈ ಚಿತ್ರದಲ್ಲಿ ಮೂಡಿಬಂದಿಲ್ಲ)


ನಂಗೆ ತಿಳುವಳಿಕೆ ಬಂದು ಸುಮಾರು ೧೬-೧೮ ವರ್ಷಗಳಿಂದ ಪ್ರತಿ ದೀಪಾವಳಿಗೆ ಇದನ್ನು ಕೇಳುತ್ತಾ ಬಂದಿದ್ದೇನೆ. ಆದರೆ, ಇವತ್ತಿಗೂ ನಾನು ದೀಪಾವಳಿಯಂದು "ಹಬ್ಬಾಡುವವರು" ಬರುವುದನ್ನು ಕಾಯುತ್ತೇನೆ. ರಾತ್ರಿ ಮಲಗಿದ ವೇಳೆಯಲ್ಲಿ ಬಂದು ಎಬ್ಬಿಸುವ ಹಬ್ಬಾಡುವವರನ್ನು ನೋಡಲು, ಅವರು ಹೇಗೇ ಹಾಡನ್ನು ಹಾಡಲಿ (ಅಥವಾ ಹೇಳಲಿ), ಕೇಳಲು ನಂಗೆ ಚಂದ.

ನಮ್ಮೂರಲ್ಲಿ ಒಂದು ಪಂಗಡದವರು ಹಬ್ಬಾಡಿದರೆ, ಇನ್ನೊಂದು ಪಂಗಡದವರು ಕೋಲಾಟ ಆಡುತ್ತಾರೆ. ಅದು ದೀಪಾವಳಿಯ ಮರುದಿನ. ಎಲ್ಲರ ಮನೆಯೆದುರು ಕೋಲಾಟವಾಡುವುದು ರೂಢಿ. ಇವರಿಗೂ ಕೂಡ ಸ್ವಲ್ಪ ಸಂಭಾವನೆಯ ಜೊತೆಗೆ ಹೋಳಿಗೆಯನ್ನು ಕೊಟ್ಟರೆ, ನಮ್ಮ ಕೆಲಸ ಕೋಲಾಟವನ್ನು ನೋಡಿ ಸಂತೋಷಪಡುವುದಷ್ಟೆ. ಅದರಲ್ಲೂ ಕೋಲಾಟದ ಮಧ್ಯೆ ಎಸೆಯುವ ನಾಣ್ಯವನ್ನು ಅವರು ಕಾಲಿನಿಂದಲೇ ಹೆಕ್ಕಿಕೊಳ್ಳುವುದು ನೋಡಲು ಬಲು ಚಂದ. (ಇದರ ಬಗ್ಗೆ ಇನ್ನೊಂದು ಬ್ಲಾಗ್)


ಮೊನ್ನೆ ಹಬ್ಬಕ್ಕೆ ಊರಿಗೆ ಹೋದಾಗ ಹಬ್ಬಾಡುವುದು ಮತ್ತು ಕೋಲಾಟ ಎರಡೂ ಸಿಕ್ಕಿತು. :-) ವೀಡಿಯೋ ಮಾಡಿದ್ದೇನೆ.