Wednesday, December 21, 2011

ಹೊಸಗುಂದದ ಇತಿಹಾಸ - ೨

ಈ ದೇವಾಲಯ ಇಲ್ಲಿನ ಜನರಿಗೆ ಮಾತ್ರ ತಿಳಿದಿತ್ತಾದರೂ, ಆಗೊಮ್ಮೆ ಈಗೊಮ್ಮೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಚರಿತ್ರೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ವಾಸ್ತುಶಿಲ್ಪ ತಜ್ಞರು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದುಂಟು. ಕೆಲವೊಂದು ಪತ್ರಿಕೆಗಳಲ್ಲಿ ವಾಸ್ತುಶಿಲ್ಪ ತಜ್ಞರು ಹೊಸಗುಂದದ ಬಗ್ಗೆ ಲೇಖನಗಳನ್ನು ಬರೆದದ್ದು ಇದೆ. ಆದರೆ ಇದು ಅಷ್ಟೇನೂ ಸುದ್ದಿ ಮಾಡಿರಲಿಲ್ಲ ಅಥವಾ ಮಹತ್ವವನ್ನು ಪಡೆದುಕೊಳ್ಳಲಿಲ್ಲ.


ಕಾರಣಾಂತರದಿಂದ ಅಪ್ಪ ಹೊಸಗುಂದದ ನಮ್ಮ ಜಮೀನನ್ನು ದಕ್ಷಿಣ ಕನ್ನಡ ಮೂಲದ ನಾರಾಯಣ ಶಾಸ್ತ್ರೀ ಎನ್ನುವವರಿಗೆ ಮಾರಿದರು. ಅವರು ಈ ದೇವಸ್ಥಾನದ ಪುನರುತ್ಥಾನದ ಕಾರ್ಯವನ್ನು ಆರಂಭಿಸಲು ಮುಂದಾದರು. ಅದಕ್ಕಾಗಿ ಒಂದು ಸಮಿತಿ ಕೂಡ ರಚನೆ ಆಯಿತು. ಸುಮಾರು ೨೦೦೦-೨೦೦೧ ರಿಂದಲೂ ಪುನರುತ್ಥಾನದ ರೂಪುರೇಷೆಗಳ ಮಾತುಕತೆ ಶುರು ಆಗಿತ್ತಾದರೂ, ೨೦೦೪-೦೫ ರ ಸಮಯದಲ್ಲಿ ಪುನರುತ್ಥಾನದ ಕಾರ್ಯ ಪ್ರಾರಂಭ ಆಗಿದೆ. ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯಸಾಗುತ್ತಿದೆ.


ಎಷ್ಟೇ ಮುಂದುವರಿದಿದ್ದರೂ ಈಗಲೂ ಹಳೆಯ ದೇವಾಲಯಗಳು, ಭಗ್ನವಾದ ವಿಗ್ರಹಗಳು ಅಂದರೆ ಜನ ಭಯಪಡುತ್ತಾರೆ. ಅದು ಹೇಗೆ ಅವಸನವಾಗಿತ್ತೋ, ಅದನ್ನು ನಾವು ಈಗ ಮುಟ್ಟಿದರೆ ನಮಗೆ ಎಲ್ಲಿ ಕೆಡಾಗುವುದೋ ಎಂಬ ಆತಂಕ ಜನಕ್ಕೆ. ಕೇರಳ ಹಾಗು ದಕ್ಷಿಣ ಕನ್ನಡದಲ್ಲಿ "ಅಷ್ಟಮಂಗಳ ಪ್ರಶ್ನೆ" ಎನ್ನುವ ಸಂಪ್ರದಾಯ/ ಪದ್ಧತಿ ಒಂದಿದೆ. ಇದು ಕೇರಳ ಹಾಗು ಗಡಿ ಭಾಗಗಳಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ ಮತ್ತು ಪ್ರಚಲಿತದಲ್ಲಿದೆ. ದಕ್ಷಿಣ ಕನ್ನಡದವರಾದ ಶಾಸ್ತ್ರೀಯವರು ಹೊಸಗುಂದದಲ್ಲಿ "ಅಷ್ಟಮಂಗಳ ಪ್ರಶ್ನೆ" ಕಾರ್ಯಕ್ರಮವನ್ನು ಏರ್ಪಡಿಸಿದರು. ಇದು ನಮ್ಮ ಕಡೆ ಹೊಸದಾದುದ್ದರಿಂದ ಇದನ್ನು ನೋಡಲು ಎಲ್ಲೆಲ್ಲಿಂದಲೋ ಜನ ಬಂದಿದ್ದರು.

ಅಷ್ಟಮಂಗಳ ನಡೆಸುವ ಜ್ಯೋತಿಷಿಗಳು ಅಥವಾ ಪಂಡಿತರ ಜೊತೆ ವಾಸ್ತುಶಿಲ್ಪ ತಜ್ಞರನ್ನು ಕೂಡ ಆಹ್ವಾನಿಸಲಾಗಿತ್ತು. ಇವರಿಬ್ಬರು ಜಂಟಿಯಾಗಿ ಅನೇಕ ಶಾಸನಗಳು, ವಿಗ್ರಹಗಳು, ಇಲ್ಲಿನ ಚರಿತ್ರೆಯನ್ನು ತೆರೆದಿಟ್ಟರು ಹಾಗು ಪುನರುತ್ಥಾನ ಮಾಡಿದರೆ ಮಂಗಳವಾಗುತ್ತದೆ, ಇದು ಮುಂದಿನ ದಿನಗಳಲ್ಲಿ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಜನರ ಆತಂಕವನ್ನು ದೂರ ಮಾಡಿದರು. ಅಷ್ಟಮಂಗಳ ಪಂಡಿತರು ಕವಡೆ, ಹೂವುಗಳ ಸಹಾಯದಿಂದ ಏನೋ ಲೆಕ್ಕ ಹಾಕಿ " ಈ ದೇವಾಲಯದಿಂದ ಈ ದಿಕ್ಕಿನಲ್ಲಿ (ಉದಾಹರಣೆಗೆ ಪೂರ್ವ) ೪ ಫಾರ್ಲಂಗು ದೂರದಲ್ಲಿ ಮಣ್ಣಿನ ಕೆಳಗೆ ಒಂದು ಭಗ್ನ ವಾಗಿರುವ ವಿಗ್ರಹ ಮತ್ತು ಪಾಣಿಪೀಠ ಇದೆ, ವಿಗ್ರಹ ಮುಖ ಅಡಿಯಾಗಿ ಇದೆ, ..... ಹೀಗೆ... " ಎಂದು ಕೂತಲ್ಲೇ ಹೇಳುತ್ತಿದ್ದರೆ, ವಾಸ್ತುಶಿಲ್ಪ ತಜ್ಞರು ಅಲ್ಲಿ ಹೋಗಿ ಅಗೆದು ನೋಡಲು ಪ್ರಸನ್ನ ನಾರಾಯಣ ವಿಗ್ರಹ ದೊರೆಯಿತು. ಅದನ್ನು ನೋಡಿದ ನಾವು ನಿಜಕ್ಕೂ ಬೆರಗಾಗಿದ್ದೆವು. ಹೀಗೆ ಒಂದೊಂದೇ ವಿಗ್ರಹಗಳನ್ನೂ ಹೊರತೆಗೆದು, ದೊರೆತ ಶಾಸನಗಳಿಂದ ತಕ್ಕಮಟ್ಟಿನ ಮಾಹಿತಿ ದೊರೆಯಿತು. ಹಾಗೆಯೇ ನನ್ನ ಹಿಂದಿನ ಪೋಸ್ಟ್ ನಲ್ಲಿ ಹೇಳಿದ "ಅರ್ಧ ಕಿ.ಮೀ. ದೂರ ಇರುವ ಅವಶೇಷ" ಕಂಚಿ ಕಾಳಮ್ಮನ ದೇವಾಲಯ ಎಂದು ಸಂಶೋಧನೆ ಇಂದ ತಿಳಿದು ಬಂತು.

ಇಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ ಸುಮಾರು ಕ್ರಿ. ಶ. ೧೧೦೦ ರಲ್ಲಿ ಹುಮ್ಚವನ್ನು (ತೀರ್ಥಹಳ್ಳಿಯ ಸಮೀಪ) ಆಳುತ್ತಿದ್ದ ಸಾಮಂತ ದೊರೆ ಹೊಸಗುಂದಕ್ಕೆ ಬಂದು ಆಳ್ವಿಕೆ ಶುರುಮಾಡಿದ. ಬಿಲ್ಲವೇಶ್ವರನ ಭಕ್ತರಾದ ಇವರು ಹೊಸಗುಂದದಲ್ಲೂ ಶಿವನ ದೇವಾಲಯವನ್ನು ನಿರ್ಮಿಸಿದರು. ಶಾಸನಗಳ ಪ್ರಕಾರ ಇವರು ಹೊಸಗುಂದವನ್ನು ಸುಮಾರು ೩೦೦ ವರ್ಷಗಳ ಕಾಲ ಆಳಿದರೆಂದು ಹೇಳಲಾಗುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಭುಜಬಲ ಹೊಸಗುಂದದ ಮೊದಲ ದೊರೆ ಎಂದು ಹೇಳಲಾಗುತ್ತಿದೆ. ಶಾಸನಗಳಲ್ಲಿ ದೊರೆತಿರುವ ಇನ್ನಿತರ ದೊರೆಗಳ ಹೆಸರು ಬೊಮ್ಮರಸ (ಕ್ರಿ. ಶ. ೧೧೫೨), ಕಾಳರಸ, ಬೀರರಸ (ಕ್ರಿ.ಶ. ೧೧೬೪-೧೧೯೪), ಬೊಮ್ಮರಸ-೨ (ಕ್ರಿ.ಶ ೧೧೯೪-೧೨೨೦), ಅಳಿಯ ಬೀರರಸ/ಹೊನ್ನಲ ದೇವಿ (ಕ್ರಿ.ಶ. ೧೨೨೦-೧೨೨೯), ಬಲದೇವ (ಕ್ರಿ.ಶ. ೧೨೨೯-೧೨೫೭)ಬೊಮ್ಮರಸ-೩ (ಕ್ರಿ.ಶ. ೧೨೫೭-೧೨೭೮), ಬೀರರಸ (ಕ್ರಿ.ಶ.೧೨೭೮-೧೨೮೩),ತಮ್ಮರಸ(ಕ್ರಿ.ಶ.೧೨೮೩-೧೨೮೮), ಸೊದ್ದಲದೇವ (ಕ್ರಿ.ಶ. ೧೨೮೮-೧೩೦೨), ಕೋಟಿನಾಯಕ ಮತ್ತು ಸೊಮೇ ನಾಯಕ (ಸುಮಾರು ಕ್ರಿ.ಶ.೧೩೦೨- ೧೩೨೦).

ಈಗ ದೇವಾಲಯದಲ್ಲಿ ಪ್ರಸನ್ನ ನಾರಾಯಣ, ಉಮಾಮಹೇಶ್ವರ, ಕಂಚಿ ಕಾಳಮ್ಮ ವಿಗ್ರಹಗಳನ್ನು ಪೂಜಿಸಲಾಗುತ್ತಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ವಿಗ್ರಹಗಳು ಮೂಲ ದೇವಾಲಯದ ಒಳಗೆ ಇಲ್ಲ. ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಸ್ವಲ್ಪ ಆಳ ತೋಡಿದ್ದರಿಂದ ಈಗ ಇದು ನೀರಿಂದ ತುಂಬಿದೆ. ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ನವರು ಕೂಡ ಹೊಸಗುಂದದ ಪುನರುತ್ಥಾನಕ್ಕೆ ಕೈ ಜೋಡಿಸಿದ್ದಾರೆ. ರಾಮಚಂದ್ರಾಪುರ ಮಠದಿಂದಲೂ ಸಹಾಯ ಒದಗಿದೆ. ಹಾಗು ಸ್ಥಳೀಯರು ಕೂಡ ಕೈ ಜೋಡಿಸಿದ್ದಾರೆ. ಇಲ್ಲಿರುವ ಕಾಡನ್ನು ಸಂರಕ್ಷಿಸಲು ಇದನ್ನು "ದೇವರ ಕಾಡು" ಎಂದು ಘೋಷಿಸಿ, ಮರ ಕಡಿಯುವುದನ್ನು(ಕದಿಯುವುದನ್ನು!) ನಿಷೇಧಿಸಲಾಗಿದೆ. ಒಟ್ಟಾರೆ ಅವಸಾನದ ಹಾದಿಯಲ್ಲಿದ್ದ ಹೊಸಗಂದ ಪುನ:ಚೇತನಗೊಳ್ಳುತ್ತಿದೆ.

ಹೊಸಗುಂದದ ಇತಿಹಾಸ - ೧


ನಾನು ಸುಮಾರು ೫-೬ ವರ್ಷದವಳಾಗಿದ್ದಾಗ ನಮ್ಮ ಮನೆ ಇದ್ದದ್ದು ಹೊಸಗುಂದ ಎಂಬ ಹಳ್ಳಿಯಲ್ಲಿ. ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು ೧೫-೧೬ ಕಿ.ಮೀ. ದೂರದಲ್ಲಿ ಇದೆ. (ಸಾಗರ- ಶಿವಮೊಗ್ಗ ರಸ್ತೆಯಲ್ಲಿ). ಅದು ತುಂಬಾ ಕಾನನ ಪ್ರದೇಶ. ನಮ್ಮ ಮನೆಯ ಸುತ್ತ ಮುತ್ತ ದಟ್ಟ ಕಾಡೆ ಇತ್ತು. ಈ ಊರಿನಲ್ಲಿ ಇದ್ದದ್ದೇ ೪-೫ ಮನೆಗಳಿರಬಹುದು. ನಮ್ಮನೆಯಿಂದ ಇನ್ನೊಂದು ಮನೆ ಸುಮಾರು ಮುಕ್ಕಾಲು ಕಿ.ಮೀ. ಮದ್ಯ ಕಾಡು, ದೊಡ್ಡ ಕೆರೆ. ನನ್ನ ಶಾಲೆ ಸುಮಾರು ಎರಡು ಕಿ.ಮೀ. ಜೊತೆಗೂಡಿ ಹೋಗಲು ಯಾರು ಇಲ್ಲ, ಒಬ್ಬಳೇ ಹೋಗುವಷ್ಟು ದೊಡ್ದವಳಲ್ಲ. ಪ್ರತಿದಿನ ಅಪ್ಪನ ಜೊತೆ ಸೈಕಲ್ಲಿನಲ್ಲಿ ಶಾಲೆಗೆ ನನ್ನ ಪ್ರಯಾಣ. ಸಂಜೆ ಆಗುತ್ತಲೇ ಮನೆಯ ಹಿತ್ತಲಿಗೆ, ತೋಟಕ್ಕೆ ದಾಳಿ ಇಡುವ ಕಾಡು ಹಂದಿಗಳು, ಕಾಡು ಎಮ್ಮೆಗಳು.... ಹೀಗೆ ಈ ಹೊಸಗುಂದವನ್ನು ಒಂದು ಕುಗ್ರಾಮ ಅಂತ ನೀವು ಕಲ್ಪನೆ ಮಾಡಿಕೊಳ್ಳಬಹುದಿತ್ತು.


ಇಲ್ಲಿದ್ದ ಕಾಡಿನ ಮರಗಳು ತುಂಬಾ ಹಳೆಯ ಮರಗಳು ಎಂಬುದನ್ನ ಅದರ ಕಾಂಡದ ಗಾತ್ರ ಮತ್ತು ಎತ್ತರ ನೋಡಿದರೆ ಹೇಳಬಹುದಿತ್ತು. ಈ ಕಾಡಿನಲ್ಲಿ ಅನೇಕ ಸಸ್ಯ ಪ್ರಭೇದಗಳು, ಅನೇಕ ವಿಧದ ಹಾವುಗಳು, ಅನೇಕ ಕೀಟ, ಪಕ್ಷಿಗಳು ಕಾಣಸಿಗುತ್ತಿದ್ದವು. ಕೆಲವೊಂದು ಮರಗಳು "ಜೇನು ಮರ " ಎಂದೇ ಪ್ರಸಿದ್ದಿ ಆಗಿತ್ತು. ಈ ಮರದಲ್ಲಿ ದೊಡ್ಡ ದೊಡ್ಡ ಜೇನಿನ ತತ್ತಿಗಳನ್ನು ಕಾಣಬಹುದಿತ್ತು. ನಮ್ಮನೆ ಗದ್ದೆ ಮತ್ತು ತೋಟದ ಗಡಿಯನ್ನು ದಾಟಿದರೆ ಈ ಕಾಡು. ಈ ಕಾಡನ್ನು ಒಮ್ಮೆ ಪ್ರವೇಶಿಸಿದರೆ ಮತ್ತೆ ಹೊರಬರುವವರೆಗೆ ಬಿಸಿಲು ತಾಗುತ್ತಿರಲಿಲ್ಲ ಅಷ್ಟು ದಟ್ಟ ಕಾಡು. ಇಂತಹ ಕಾಡಿನಲ್ಲಿ ಒಂದು ಪಾಳುಬಿದ್ದ ದೇವಸ್ಥಾನ ಇತ್ತು. ನಮ್ಮನೆಗೆ ಯಾರದ್ರು ನೆಂಟರು ಬಂದಾಗ ಅಪ್ಪ ಅವರನ್ನ ಅಲ್ಲಿಗೆ ಕರೆದುಕೊಂಡು ಹೋಗಿ ದೇವಸ್ಥಾನ ತೋರಿಸುತ್ತಿದ್ದಿದ್ದುಂಟು. ಇದು ಮಾಮೂಲಿ ದೇವಸ್ಥಾನ ಆಗಿರಲಿಲ್ಲ. ಈ ದೇವಸ್ಥಾನದ ಸುತ್ತ ದೊಡ್ಡ ಅಗಳ (ಕಂದಕ) ಇತ್ತು. ನೋಡಿದರೆ ಕೋಟೆಯ ಅಗಳ ಅನ್ನುವಂತಿತ್ತು. ಒಂದು ಕಲ್ಯಾಣಿ ಕೂಡ ಇತ್ತು. ಮಳೆಗೆ ಕೊಚ್ಚಿಕೊಂಡು ಬರುವ ಮಣ್ಣು, ಮರದ ಎಲೆಯಿಂದ ಆ ಕಲ್ಯಾಣಿ ಮುಚ್ಚಿಹೋಗಿತ್ತು, ಆದರೆ ಕಲ್ಲು ಕಟ್ಟಿ ಮಾಡಿದ ಗುರುತು ಇರುವುದರಿಂದ ಕಲ್ಯಾಣಿ ಎಂದು ಹೇಳಬಹುದಿತ್ತು. ದೇವಸ್ಥಾನದ ಸುತ್ತ ಮುತ್ತ ಸುಮಾರು ಶಿಲಾ ಶಾಸನಗಳನ್ನ ಕಾಣಬಹುದಿತ್ತು. ಈ ದೇವಾಲಯದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಬಾಗಿಲಿನ ಚೌಕಟ್ಟು ಎನ್ನಬಹುದಾದ ಆಕಾರದ ಸುಂದರ ಕಲ್ಲಿನ ಕೆತ್ತಿನೆವುಳ್ಳ ಅವಶೇಷ ಕೂಡ ಇತ್ತು. ಅದರ ಸುತ್ತ ಮುತ್ತ ಸಹ ಶಾಸನಗಳು, ಸಣ್ಣ ಸಣ್ಣ ಕಲ್ಲಿನ ವಿಗ್ರಹಗಳು ನೋಡಸಿಗುತ್ತಿದ್ದವು. ಇದು ಯಾವುದೊ ಕಾಲದಲ್ಲಿ ರಾಜರ ಸಂಸ್ಥಾನವಾಗಿದ್ದಿರಬಹುದೆಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅಲ್ಲಿರುವ ಶಿಲಾ ಶಾಸನವನ್ನು ಓದಿ ಅಧ್ಯಯನ ಮಾಡಲು ಯಾರು ಇರಲಿಲ್ಲ. ಲಿಪಿ ಅರ್ಥವಾಗುತ್ತಿರಲಿಲ್ಲ.

ಅಲ್ಲಿ ಓಡಾಡುವಾಗ ಯಾವುದಾದರು ಶಾಸನ ಕಾಲಿಗೆ ಎಡವಿದರೆ, ಅದನ್ನು ಎತ್ತಿ ನಿಲ್ಲುಸುವ ಕೆಲಸವನ್ನಂತೂ ನಮ್ಮಪ್ಪ ಹಾಗು ನಮ್ಮ ಮನೆಯವರು ಮಾಡಿದ್ದರು. ಗದ್ದೆಯಲ್ಲೋ ತೋಟದಲ್ಲೋ ಅಗೆಯುವಾಗ, ಕೆಲಸ ಮಾಡುವಾಗ ಸಿಕ್ಕಿರುವ ಭಗ್ನವಾಗಿರುವ ಕಲ್ಲಿನ ವಿಗ್ರಹಗಳನ್ನು ಸಂರಕ್ಷಿಸಿದ್ದಾರೆ. ನಮ್ಮನೆ ಮಾತ್ರ ಅಲ್ಲ ಈ ಊರಿನಲ್ಲಿ ಎಲ್ಲ ಕಡೆ ಈ ಥರ ವಿಗ್ರಹಗಳು, ಶಾಸನಗಳು ಕಾಣಸಿಗುತ್ತಿದ್ದವು. ತೋಟದಲ್ಲಿ, ಗದ್ದೆಯಲ್ಲಿ ಸಸಿ ನೆಡಲು ಅಗೆಯುವಾಗ ಕೆಲವರಿಗೆ ಬಂಗಾರದ ವಸ್ತುಗಳು ಕೂಡ ದೊರಕಿವೆ ಎಂಬ ವದಂತಿ ಇತ್ತು. ಎಷ್ಟು ನಿಜವೋ ಗೊತ್ತಿಲ್ಲ!! ಏನೆ ಇರಲಿ ಇದೆಲ್ಲದರಿಂದ ಇಲ್ಲಿ ರಾಜರ ಆಳ್ವಿಕೆ ಇತ್ತು ಎಂಬುದು ಸಾಬೀತಾಗುತ್ತದೆ.

ದೇವಸ್ಥಾನದ ಗರ್ಭ ಗುಡಿ ಖಾಲಿ ಇತ್ತು. ಆದರೆ ಗರ್ಭ ಗುಡಿಯ ಹೊರಗೆ ಒಂದು ನಂದಿಯ ವಿಗ್ರಹ ಹಾಗು ಮೆಟ್ಟಿಲಿನ ಎರಡೂ ಪಕ್ಕದಲ್ಲಿ ಒಂದೊಂದು ಆನೆ ಇದ್ದಿದನ್ನು ನೋಡಿದವರು ಇದ್ದಾರೆ. ಆದರೆ ಅದು ನಾನು ದೇವಸ್ಥಾನವನ್ನು ನೋಡುವ ಕಾಲಕ್ಕೆ ಮಾಯವಾಗಿತ್ತು. ಯಾವೊದೋ ಊರಿನವರು ಅದನ್ನು ಕದ್ದೊಯ್ದು ತಮ್ಮೂರಿನ ದೇವಸ್ಥಾನದಲ್ಲಿ ಇಟ್ಟಿದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು!! ಒಟ್ಟಾರೆ ಈ ದೇವಸ್ಥಾನ ಸುಮಾರು ೧೯೯೧-೯೨ ರಲ್ಲೇ ದೇವರಿಲ್ಲದ ಆಸ್ಥಾನವಾಗಿತ್ತು. ನಂದಿ ಇದ್ದದ್ದನ್ನು ನೋಡಿದವರು ಇದು ಶಿವನ ದೇವಾಲಯ ಅಂತ ಹೇಳುತ್ತಿದ್ದರು. ಈ ಮುಖ್ಯ ದೇವಾಲಯದ ಪಕ್ಕ ದಕ್ಷಿಣಕ್ಕೆ ಮುಖವಾಗಿರುವ ಇನ್ನೊಂದು ಪುಟ್ಟ ಗುಡಿ ಇತ್ತು. ಅದರಲ್ಲೂ ದೇವರು ಇರಲಿಲ್ಲ. ಜನ ತಮ್ಮ ತಮ್ಮ ಬುದ್ಧಿಗೆ ನಿಲುಕಿದಂತೆ ಯಾವ ದೇವರಿದ್ದಿರಬಹುದೆಂದು ಊಹೆ ಮಾಡುತ್ತಿದ್ದರು. ಮುಖ್ಯ ದೇವಾಲಯದ ದೇವರು ಶಿವ ಆಗಿರುವುದರಿಂದ ಈ ಗುಡಿ ಪಾರ್ವತಿಯದ್ದಾಗಿರಿತ್ತದೆ ಎಂಬುದು ಕೆಲವರ ವಾದವಾದರೆ ಇನ್ನು ಕೆಲವರು ಇದು ವೀರಭದ್ರನ ಗುಡಿ ಎಂದು ಹೇಳುತ್ತಿದ್ದರು.

ದೇವರಿಲ್ಲದೆ ಒಂದು ರೀತಿ ಹಾಳು ಬಿದ್ದಿದ್ದ ದೇವಾಲಯ, ಪ್ರಕೃತಿಯಿಂದಾಗಿ ಕೂಡ ಅವಸಾನದ ಹಾದಿ ಹಿಡಿದಿತ್ತು. ಮಲೆನಾಡಿನ ಮಳೆ ಹಾಗು ಸಿಡಿಲಿಗೆ ದೇವಾಲಯದ ಕೆಲವು ಆಧಾರ ಸ್ತಂಭಗಳು ಬಿರುಕು ಬಿಟ್ಟಿದ್ದರೆ, ಮರದ ದೊಡ್ಡ ದೊಡ್ಡ ಬೇರುಗಳು ದೇವಾಲಯದ ಅಡಿಗೆ ಹಾದು ಹೋಗಿ ಕಲ್ಲಿನ ಗೋಡೆಗಳನ್ನು ಶಿಥಿಲಗೊಳಿಸಿದ್ದವು. ಒಂದು ಮುಖ್ಯ ಆಧಾರ ಸ್ತಂಭವಂತೂ ಬೇರು ಒಳಹೊಕ್ಕಿದ ಪರಿಣಾಮವಾಗಿ ವಾಲಿಹೋಗಿತ್ತು. ಒಟ್ಟಾರೆ ಅವಸಾನದ ಹಾದಿಯಲ್ಲಿ ಇತ್ತು. ಆದರೂ ದೇವಸ್ಥಾನದ ಮೇಲ್ಛಾವಣಿಯ ಮೇಲಿದ್ದ ಕಲಾತ್ಮಕ ಕೆತ್ತನೆಗಳು, ಒಂದೇ ಕಲ್ಲಿನಿಂದ ಮಾಡಲ್ಪಟ್ಟ ರಂಗಸ್ಥಳ, ಕಲ್ಲಿನ ಗೋಡೆಗಳ ಮೇಲೆ ಇದ್ದ ಕೆತ್ತನೆಗಳು ದೇವಸ್ಥಾನದ ಅಂದವನ್ನು ಕಾಪಾಡಿತ್ತು.

ನಿಮಗೇ ತಿಳಿದಂತೆ ಭಾರತದ ಪುರಾತನ ವಿಗ್ರಹಗಳಿಗೆ ವಿದೇಶಗಳಲ್ಲಿ ನಾವು ಕಲ್ಪಿಸಿಕೊಳ್ಳಲು ಸಾಧ್ಯವಿರದಷ್ಟು ಬೆಲೆ ಇದೆ. ಇದನ್ನು ಅರಿತಿದ್ದ ಕೆಲವು ಶ್ರೀಮಂತರು, " ಆ ದೇವಸ್ಥಾನದ ಮುಖ್ಯ ಬಾಗಿಲನ್ನು (ವಾಸ್ತು ಬಾಗಿಲು) ಕೀಳಿಸಿಕೊಡುತ್ತಿರಾ ನಿಮಗೆ ದುಡ್ಡು ಕೊಡುತ್ತೇವೆ" ಎಂದು ಊರಿನವರನ್ನು ಕೇಳಿದವರೂ ಇದ್ದಾರೆ!! ಅದನ್ನು ಉದ್ಧಾರ ಮಾಡಲು ಆಗದೇ ಇದ್ದರೂ ಹಾಳು ಮಾಡುವ ಕೆಲಸವನ್ನಂತೂ ಮಾಡಬಾರದು ಎಂದು ನಂಬಿದವರು ಹಳ್ಳಿಯವರು. ಅದ್ದರಿಂದ ವಾಸ್ತು ಬಾಗಿಲು, ವಿಗ್ರಹಗಳು ದೇವಾಲಯದಲ್ಲೇ ಉಳಿದುಕೊಂಡವು.
ಕುಗ್ರಾಮವಾಗಿದ್ದ ಹೊಸಗುಂದ ಈಗ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಆಗಿದೆ. ವಿದೇಶಿ ಪ್ರವಾಸಿಗರು, ವಿದೇಶಿ ವಿಶ್ವವಿದ್ಯಾನಿಲಯದ ಅಧ್ಯಯನ ತಂಡಗಳು ಇಲ್ಲಿಗೆ ಭೇಟಿನೀಡುತ್ತಿವೆ. ಕಾರಣ ಅನೇಕರ ಶ್ರದ್ಧೆ ಮತ್ತೆ ಶ್ರಮದ ಫಲವಾಗಿ ದೇವಾಲಯದ ಪುನರುತ್ಥಾನ ಕಾರ್ಯ ಆರಂಭ ಆಗಿದೆ.  ಹೇಗೆ, ಏನು, ಇನ್ನೊಂದು ಭಾಗದಲ್ಲಿ ಬರೀತೀನಿ.

Saturday, August 20, 2011

ದೇವದೇವರ ಮಹಾದೇವ ಸೂರ್ಯದೇವ

ಹೆಚ್ಚಿನ ನಾಗರಿಕತೆಗಳ ಪ್ರಕಾರ ಸೂರ್ಯ ದೇವನೇ ಎಲ್ಲರಿಗಿಂತ ಪ್ರಮುಖ ದೇವರು. ಪ್ರಖ್ಯಾತ ಈಜಿಪ್ಟ್ ಪುರಾಣದ ಪ್ರಕಾರ "ರ" ಎಂದು ಕರೆಸಿಕೊಳ್ಳುತ್ತಿದ್ದ ಸೂರ್ಯ ಅವರಿಗೆ ದೇವರಾಗಿದ್ದನು. "ರ" ಆಕಾಶದಲ್ಲಿ ದೋಣಿಗಳಲ್ಲಿ ಸಾಗುತ್ತಾನೆ ಎಂದು ಈಜಿಪ್ಟ್ ನಾಗರಿಕತೆ ಹೇಳುತ್ತದೆ. ರೋಮನ್ ಸಾಮ್ರಾಜ್ಯದಲ್ಲಿ "ಸೋಲ್ ಇನ್ವಿಕ್ಟಸ್" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಜರ್ಮನ್ ಪುರಾಣದ ಪ್ರಕಾರ ಸೂರ್ಯದೇವನು "ಸೋಲ್" ಎಂದು ಕರೆಯಿಸಿಕೊಳ್ಳುತ್ತಿದ್ದನು. ಗ್ರೀಕ್ ಪುರಾಣದಲ್ಲೂ ಕೂಡ ಸೂರ್ಯದೇವನು ಪ್ರಮುಖನು. ಅವನನ್ನು "ಹೀಲಿಯೋಸ್", "ಟೈಟನ್", ಮತ್ತು "ಅಪೋಲೋ" ಎಂಬುದಾಗಿ ಕರೆಯುತ್ತಿದ್ದರು. ಪುರಾತನ ನಾಗರಿಕತೆ ಮೆಸೊಪೊಟೊಮಿಯಾದಲ್ಲಿ "ಶಮಶ್" ಎಂದು ಕರೆಯಲಾಗುತ್ತಿದ್ದ ಸೂರ್ಯದೇವನು ಪ್ರಮುಖ ದೇವನು. ದಕ್ಷಿಣ ಅಮೇರಿಕಾದ ಪ್ರಸಿದ್ಧ ನಾಗರಿಕತೆ ಇನ್ಕಾದಲ್ಲಿ "ಇಂತಿ" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಹೀಗೆ ಉದಾಹರಿಸುತ್ತ ಹೋದರೆ ಸೂರ್ಯನೇ ಪ್ರಮುಖ ದೇವನಾದ ಇನ್ನೂ ಹಲವಾರು ನಾಗರಿಕತೆಗಳು, ಪುರಾಣಗಳು ಸಿಕ್ಕುತ್ತವೆ.

ಹಿಂದೂ ಪುರಾಣದಲ್ಲೂ ಸೂರ್ಯದೇವ ಪ್ರಮುಖ ದೇವರುಗಳಲ್ಲೊಬ್ಬ. ಆದರೆ ಎಲ್ಲರಿಗಿಂತ ಮಿಗಿಲು ತ್ರಿಮೂರ್ತಿಗಳಾದ ಹರಿ, ಹರ, ವಿರಿಂಚಿಗಳು (ಬ್ರಹ್ಮ), ಎಂದು ನಾನಂದುಕೊಂಡಿದ್ದೆ! ಈ ಅಭಿಪ್ರಾಯಕ್ಕೆ ಧಕ್ಕೆಬರುವಂತ ರೀತಿಯಲ್ಲಿ ಕುಮಾರವ್ಯಾಸ ಭಾರತದಲ್ಲಿ ಬರೆಯಲಾಗಿದೆ. ಅರಣ್ಯಪರ್ವದ ೭ ನೇ ಸಂಧಿಯಲ್ಲಿ ಅರ್ಜುನನನ್ನು ಇಂದ್ರನ ಆಸ್ಥಾನಕ್ಕೆ ಕರೆದೊಯ್ಯುತ್ತ ಇಂದ್ರಸಾರಥಿ ಮಾತಲಿಯು ಅರ್ಜುನನಿಗೆ ಭೂಮಿ, ಬೇರೆ ಬೇರೆ ಲೋಕ ಹಾಗೂ ಬ್ರಹ್ಮಾಂಡಗಳ ಬಗ್ಗೆ ವಿವರಿಸುತ್ತಾನೆ. ಆ ಸಂದರ್ಭದಲ್ಲಿ ದಿನಕರನು ಪರಮಾತ್ಮ. ಮಹಾದೇವರಾದ ಹರಿಹರವಿರಿಂಚಿಗಳು ಅತಿ ಬಲವಂತನಾದ ಸೂರ್ಯನನ್ನು ಪ್ರಾರ್ಥಿಸುತ್ತಾರೆ. ಕಾಲವು ರವಿರಥದ ಚಕ್ರ ಎಂದು ಹೇಳುತ್ತಾನೆ. ಸೂರ್ಯ ಎಂದರೆ ಬೆಂಕಿ. ಸುರಪಥಿಯಾದ ದೇವೇಂದ್ರನ ಆಸ್ಥಾನದ ದೇವತೆಗಳಲ್ಲಿ ಒಬ್ಬನಾದ ಅಗ್ನಿ ಎಂದರೂ ಬೆಂಕಿಯೇ. ಅಗ್ನಿ ಇಂದ್ರನಿಗೆ ನಮಿಸಿದರೆ, ಇಂದ್ರ ತ್ರಿಮೂರ್ತಿಗಳಿಗೆ ನಮಿಸುತ್ತಾನೆ ಹಾಗೂ ತ್ರಿಮೂರ್ತಿಗಳಿಗೆ ಸೂರ್ಯನು ದೇವನಾದರೆ, ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ಆಗಬೇಕಾಗುತ್ತದೆ! ಹಾಗಾದರೆ ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ದೇವರೇ? ಹಿಂದೂ ಧರ್ಮದ ಜಿಜ್ಞಾಸೆಗಳಲ್ಲಿ ಇದೂ ಒಂದೇ?

Monday, August 1, 2011

ನಾಗಲಿಂಗ ಪುಷ್ಪ


ಮಧ್ಯದಲ್ಲಿ ಲಿಂಗ, ಹೆಡೆಯಂತೆ ಅದನ್ನಾವರಿಸುವ ಆಕಾರ, ಹೂವಿಗೆ ನಾಗಲಿಂಗ ಎಂಬ ಹೆಸರನ್ನು ನೀಡಿದೆ. ಮರದ ಕಾಂಡದಿಂದ ಹೊರಡುವ ಉದ್ದನೆಯ ಬಿಳಲಿನಲ್ಲಿ ಹೂವು ಅರಳುತ್ತದೆ. ಲಿಂಗದ ಸುತ್ತಲು ದಳಗಳು ಅಥವಾ ಹೂವಿನ ಪಕಳೆಗಳು ಇರುತ್ತದೆ.

ಹೂವು ಎಷ್ಟು ಸುವಾಸನೆ ಬೀರುತ್ತದೆಯೋ, ಇದರಲ್ಲಿ ಬಿಡುವ ಕಾಯಿ ಉದುರಿ ಒಡೆದು ಹೋದಾಗ ಅಷ್ಟೇ ದುರ್ವಾಸನೆ ಬೀರುತ್ತದೆ. ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಮರವು ಸಾಲುಮರವಾಗಿ ಕಾಣಸಿಗುತ್ತದೆ. ಇದರ ಕಾಯಿಯ ಗಾತ್ರ ಸಕ್ಕರೆ ಕಂಚಿಯನ್ನು (ಚಕೋತ ಹಣ್ಣು) ಹೋಲುತ್ತದೆ. ಮರದ ನೆರಳಿನಲ್ಲಿ ನಿಮ್ಮ ಕಾರನ್ನೂ ಬೈಕನ್ನೋ ನಿಲ್ಲಿಸುವಾಗ ಜೋಕೆ! ಕಾಯಿ ಬಿತ್ತೆಂದರೆ ನಿಮ್ಮ ಕಾರಿನ ಗಾಜು ಒಡೆಯಬಹುದು ಅಥವಾ ಡೆಂಟ್ ಆಗಬಹುದು!

ಅಂದ ಹಾಗೆ ಮರದ ಮೂಲ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡು. ಹೂವಿನಲ್ಲಿ ಮಕರಂದ ಇರುವುದಿಲ್ಲವಂತೆ! ಶಿವನಿಗೆ ಅತ್ಯಂತ ಶ್ರೇಷ್ಠವಂತೆ. ಕೈಲಾಸಪತಿಯೇ ವಿದೇಶಿ ವಸ್ತುವಿಗೆ ಮಾರುಹೋದಮೇಲೆ ನಾವು ವಿದೇಶಿ ವಾಚು, ವಿದೇಶಿ ಬಟ್ಟೆಗಳಿಗೆ ಮರುಳಗುವುದು ಆಶ್ಚರ್ಯವೇನಲ್ಲ ಬಿಡಿ!

Friday, July 22, 2011

ಪಾಂಡವರ ಧರ್ಮದ ಮಧ್ಯೆ ದ್ರೌಪದಿ ವಸ್ತ್ರಾಪಹರಣ

ಬಹಳ ದಿನಗಳ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದೆ. ಧರ್ಮರಾಯನಿಗೆ ಶಿಕ್ಷೆ ಎನ್ನುವ ಶೀರ್ಷಿಕೆಯಡಿಯಲ್ಲಿ. ಆ ಪ್ರಶ್ನೆಗೆ ಉತ್ತರಿಸುತ್ತ ಹೊಸಮನೆಯವರು, "ದ್ರೌಪದಿ ಕೂಡ ಜೂಜಿನಲ್ಲಿ ಅವಳನ್ನು ಒತ್ತೆ ಇಟ್ಟಿದ್ದಕ್ಕೆ ಆಕ್ಷೆಪಿಸಲಿಲ್ಲ. ಆದರೆ ತನ್ನನ್ನು ತಾನು ಸೋತ ನಂತರ ಧರ್ಮರಾಯ ಅವಳನ್ನು ಪಣವಾಗಿ ಒಡ್ಡುವುದು ಯಾವ ಧರ್ಮ ಎಂದು ಪ್ರಶ್ನಿಸುತ್ತಾಳೆ" ಎಂದು ಹೇಳಿದ್ದಾರೆ.
ಮೊನ್ನೆ ಮೊನ್ನೆ, ಕುಮಾರವ್ಯಾಸ ಕಥಾಮಂಜರಿಯ ಸಭಾಪರ್ವವನ್ನು ಓದಿ ಮುಗಿಸಿದೆ. ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ಓದಿದಾಗ ಅಂದಿನ ಪ್ರಶ್ನೆ ಮತ್ತೆ ಉದ್ಭವಿಸಿತು. "ತನ್ನನ್ನು ತಾನು ಸೋತ ನಂತರ ಹೇಗೆ ಪರರನ್ನು ಜೂಜಿನಲ್ಲಿ ಒತ್ತೆ ಇಡಲು ಸಾಧ್ಯ? ಇದು ಧರ್ಮವೇ?" ಎಂದು ಕೇಳಿದಾಗ, ಭೀಷ್ಮಾದಿಗಳನ್ನೋಳಗೊಂಡು, ಆಸ್ಥಾನದಲ್ಲಿದ್ದ ಯಾರೂ ಮಾತನಾಡುವುದಿಲ್ಲ. ಇದು ಏಕೆಂದು ನನಗೆ ಗೊಂದಲವಾಯಿತು. ಯೋಚಿಸಿದಾಗ ಒಂದು ಸಾಧ್ಯತೆ ಗಮನಕ್ಕೆ ಬಂತು. ಧರ್ಮರಾಯ ಸೋತಾಗಿತ್ತು. ಕೌರವನ ಕಿಂಕರನಾಗಿಯಾಗಿತ್ತು. ಆ ನಂತರ ಗೆದ್ದವರು ಹೇಳಿದಂತೆ ಅವನು ಕೇಳುವುದು ಧರ್ಮ. ಅವರು ವಡ್ಡು ಏನೆಂದು ಕೇಳಿದರು. ಇವನು ಹೇಳಿದ. ಇವನು ಹೇಳಿದ್ದನ್ನು ಅವರು ಒಪ್ಪಿದರು. ಹಾಗಾಗಿ ಇಲ್ಲಿ ಧರ್ಮದ ಉಲ್ಲಂಘನೆ ಆಗಿಲ್ಲ ಅನ್ನಿಸಿತು.
ಇನ್ನು ಪ್ರಾಣಕ್ಕಿಂತ ಮಾನ ದೊಡ್ಡದು ಎಂದು ಎಷ್ಟೋ ಕಡೆ ಓದುತ್ತೇವೆ, ಕೇಳುತ್ತೇವೆ. ತಮ್ಮ ಪಟ್ಟದರಸಿಯ ಮಾನಕ್ಕೆ ಸಂಚಕಾರ ಬಂದಾಗಲೂ ಧರ್ಮ ಎನ್ನುತ್ತಾ, ಸುಮ್ಮನಿದ್ದ ಧರ್ಮರಾಯಾದಿ ಪಾಂಡವರು ಮಾಡಿದ್ದು ಸರಿಯೇ? ಧರ್ಮ, ಹಾಗಾದರೆ ಮಾನಕ್ಕಿಂತಲೂ ಉನ್ನತವಾದದ್ದೇ! ಇಂದಿಗೂ?!

Monday, July 18, 2011

ಹಳೆಗನ್ನಡದ ಪುರಾಣ......

ನಾನು ಸ್ಕೂಟರ್ ನಿಲ್ಲಿಸಿದಾಗ ನಮ್ಮ ಆಫೀಸಿನ ಸೆಕ್ಯೂರಿಟೀ ಗಾರ್ಡ್ ಎಂದಿನಂತೆ ಗಾಡಿಯ ನಂಬರ್ ಅನ್ನು ಬರೆದುಕೊಂಡು ನನ್ನ ಸ್ಕೂಟರ್ ಪಕ್ಕ ನಿಲ್ಲಿಸಿದ ಬೈಕಿನತ್ತ ಕಣ್ಣು ಹಾಯಿಸಿ, ಅಲ್ಲೇ ಹತ್ತಿರದಲ್ಲಿ ಇದ್ದ ಇನ್ನೊಬ್ಬ ಸೆಕ್ಯೂರಿಟೀ ಗಾರ್ಡ್ ಅನ್ನು ಕೈಸನ್ನೆ ಮಾಡಿ ಕರೆದ. ಆ ಬೈಕಿನ ನಂಬರ್ ಪ್ಲೇಟ್ ಅನ್ನು ಕನ್ನಡ ಅಂಕೆಯಲ್ಲಿ ಬರೆಯಲಾಗಿತ್ತು .ಅವನು ಬಂದು ಕೆಎ-೦೫ ಹೆಚ್ ೧೯೮೯ ಅಂತ ಓದಿ ಹೇಳಿದ. ಸೆಕ್ಯೂರಿಟೀ ಗಾರ್ಡ್ ಗಳಲ್ಲಿ ಹೆಚ್ಚಿನವರು ಉತ್ತರ ಅಥವಾ ಈಶಾನ್ಯ ಭಾರತದವರಾಗಿರುತ್ತಾರೆ. ಕುತೂಹಲಕ್ಕೆ ಕೇಳಿದೆ- " ಅವರಿಗೆ ಕನ್ನಡ ಬರಲ್ವಾ?" ಅಂತ. ಅದಕ್ಕೆ ಅವನು - "ಇಲ್ಲ ಮೇಡಮ್, ಅವರು ಕನ್ನಡದವರೇ , ಆದ್ರೆ ಇದು ಹಳೆಗನ್ನಡದಲ್ಲಿ ಇದ್ಯಲ್ಲಾ ಅದ್ಕೆ ಓದಕ್ಕೆ ಬರಲ್ಲ. ನಂಗೆ ಬರುತ್ತೆ ಮೇಡಮ್ ಅನ್ನುವುದೇ?!"

Monday, June 27, 2011

ಮಣ್ಣಾಗಿ ಬಂದ ಲಕ್ಷ್ಮಿ ಕಾಸು!

ಮೊನ್ನೆ, ನಮ್ಮ ಮನೆಯಲ್ಲೊಂದು ಅತ್ಯಾಶ್ಚರ್ಯವಾದ ಹಾಗೂ ಸಂತೋಷಕರವಾದ ಘಟನೆ ನಡೆಯಿತು.

ನಮ್ಮ ದೊಡ್ಡಪ್ಪನ ಮನೆಯ ದನ, ಬೆಳಗ್ಗೆ ಮೇಯಲು ಬಿಟ್ಟ ತಕ್ಷಣ ನಮ್ಮನೆಗೆ ಬರುತ್ತದೆ. ನಮ್ಮಮ್ಮ ಹಿಂದಿನ ದಿನ ಉಳಿದಿರುವುದೆಲ್ಲವನ್ನು ಕೊಟ್ಟ ಬಳಿಕವಷ್ಟೇ ಅದರ ಮುಂದಿನ ತಿರುಗಾಟ. ಬಿಟ್ಟೊಡನೆ ನಮ್ಮನೆಗೆ ಬರದೆ ಅದು ಹೋಗುವುದಿಲ್ಲ, ಒಂದಿನ ಬಂದಿಲ್ಲ ಅಂದ್ರೆ ನಮ್ಮಮ್ಮ "ಯಾಕೆ ಇಂದು ದನ ಬಂದಿಲ್ಲ, ಯಾಕೆ ಇವತ್ತು ಮೇಯಲು ಬಿಟ್ಟಿಲ್ಲ" ಎಂದು ನಮ್ಮ ಅಣ್ಣನಲ್ಲಿ (ದೊಡ್ಡಪ್ಪನ ಮಗ) ವಿಚಾರಿಸುತ್ತಾಳೆ.
ಸುಮಾರು ೫-೬ ವರ್ಷದ ಹಿಂದೆ ನಮ್ಮಮ್ಮನೆ ಕತ್ತಿನಲ್ಲಿದ್ದ ಲಕ್ಷ್ಮಿ ಕಾಸು (ಬಂಗಾರದ pendant) ಕಳೆದು ಹೋಯಿತು. ಕಡೆಯ ಬಾರಿ ಯಾವಾಗ ನೋಡಿಕೊಂಡಿದ್ದು ಎಂದು ನೆನಪು ಮಾಡಿಕೊಂಡಾಗ ದನಕ್ಕೆ ತಿನ್ನಲು ಕೊಡಲು ಹೋಗಬೇಕಾದರೆ ಇತ್ತು ಎಂದಾಯಿತು. ಆ ಜಾಗದಲ್ಲೆಲ್ಲ ಹುಡುಕಿದೆವು. ಎಲ್ಲೂ ಸಿಗಲಿಲ್ಲ. ದನವೇ ತಿಂದಿರುವುದು ನಿಶ್ಚಿತ ಎಂದಾಯಿತು. ದೊಡ್ಡಪ್ಪನ ಮಗನಲ್ಲಿ ಹೇಳಿದಳು ಅಮ್ಮ. ಅವನು ಅದನ್ನು ೩-೪ ದಿನ ಮೇಯಲು ಬಿಡದೆ ಮನೆಯಲ್ಲೇ ಕಟ್ಟಿ ಹಾಕಿ, ಅದು ಸಗಣಿ ಹಾಕಿದಾಗಲೆಲ್ಲ ಕಣ್ಣು ಹಾಯಿಸಿದರು. ಲಕ್ಷ್ಮಿ ಕಾಸು ಸಿಗಲಿಲ್ಲ!
ಕಾಲ ಕ್ರಮೇಣ ಘಟನೆ ನೆನಪಿನಿಂದ ಮಾಸಿತು. ಈಗ್ಗೆ, ಸುಮಾರು ೩ ವರ್ಷಗಳ ಹಿಂದೆ ಮುಪ್ಪಾದ ಆ ದನ ಸತ್ತು ಹೋಯಿತು. ಸುಮಾರು ೨೨ ವಯಸ್ಸಾದ ಆ ದನ ನಮ್ಮ ದೊಡ್ಡಪ್ಪನ ಮನೆಯಲ್ಲೇ ಹುಟ್ಟಿದ್ದು. ಮನೆಯ ಮುಂದುಗಡೆ ಹಿತ್ತಲಿನಲ್ಲಿ ಅದರ ಸಂಸ್ಕಾರ ನೆರವೇರಿತು. (ಮಣ್ಣಿನಲ್ಲಿ ಹುಗಿದರು). ಮೊನ್ನೆ, ೨-೩ ದಿನಗಳ ಹಿಂದೆ ದೊಡ್ಡಪ್ಪನ ಮನೆಯವರು ದನ ಹುಗಿದ ಜಾಗದಲ್ಲಿ ಗಿಡ ನೆಡಲು ನೆಲ ಅಗೆಸಿದರು. ಅಗೆದವನು ಮಣ್ಣನ್ನು ಅಲ್ಲೇ ಪಕ್ಕಕ್ಕೆ ರಸ್ತೆ ಬದಿಯಲ್ಲಿ ಹಾಕಿದ. ದಾರಿಯಲ್ಲಿ ಶಾಲೆಗೆ ಹೋಗುವ ಹುಡುಗಿಯೊಬ್ಬಳು ದೊಡ್ಡಮ್ಮನನ್ನು ಕರೆದು "ನೋಡಿ ಅಮ್ಮಾವ್ರೇ, ಇಲ್ಲೇನೋ ಬಂಗಾರದ್ದು ಬಿದ್ದೈತೆ" ಎಂದು ಆ ಲಕ್ಷ್ಮಿ ಕಾಸನ್ನು ಕೊಡುವುದೇ! ಅದನ್ನು ತೊಳೆದು ತಂದು ದೊಡ್ಡಮ್ಮ ಅಮ್ಮನಲ್ಲಿಗೆ ತಂದು ತೋರಿಸಿದಾಗ, ಅದು ಅಮ್ಮನದೇ ಎಂದು ದೃಢಪಟ್ಟಿತು. ನಮ್ಮ ಆಶ್ಚರ್ಯ ಮತ್ತು ಸೊಂತೋಷಕ್ಕೆ ಪಾರವೇ ಇರಲಿಲ್ಲ. :-)

ದನದ ದೇಹದ ಯಾವ ಭಾಗದಲ್ಲಿ ಲಕ್ಷ್ಮಿ ಕಾಸಿತ್ತು ಎಂಬುದರ ಬಗ್ಗೆ ನಾನಿನ್ನೂ ಸ್ವಲ್ಪ ಸಂಶೋಧನೆ ಮಾಡಬೇಕಿದೆ.

Saturday, June 4, 2011

ಕುಮಾರವ್ಯಾಸ ಭಾರತ - ಆದಿಪರ್ವ

ಶ್ರೀ ಎಲ್ ಗುಂಡಪ್ಪನವರು ಗದ್ಯಾನುವಾದಿಸಿದ ಕರ್ಣಾಟಕ ಭಾರತ ಕಥಾಮಂಜರಿಯ ಆದಿಪರ್ವವನ್ನು ಈಗಷ್ಟೇ ಓದಿ ಮುಗಿಸಿದೆ. ಕ್ರುಷ್ಣರ್ಜುನರು ಖಾಂಡವ ವನವನ್ನು ದಹಿಸಲು ಸಹಕರಿಸಿದ್ದು ಆಯಿತು. ನನ್ನನ್ನು ಕೆಲವು ಸಂದೇಹಗಳು ಕಾಡುತ್ತಿವೆ. ಭೀಷ್ಮನ ಪ್ರತಿಜ್ಞೆಯ ಬಗ್ಗೆ ತುಂಬಾ ಕಡಿಮೆ ವಿವರವಿದೆ. ಅಂಬೆ ಮತ್ತು ಸಾಲ್ವರ ಪ್ರೇಮದ ಮತ್ತು ಭೀಷ್ಮ ಸಾಲ್ವರ ಯುದ್ಧಗಳ ಉಲ್ಲೇಖವೇ ಇಲ್ಲ! ದ್ರೌಪದಿಯ ಸ್ವಯಂವರದವರೆಗೂ ಬಲರಾಮಕೃಷ್ಣರ ಹಾಗೂ ಪಾಂಡವರ ಭೇಟಿಯ ಬಗ್ಗೆ ಇಲ್ಲ. ನನ್ನ ಅರಿವಿನ ಪ್ರಕಾರ ಅರ್ಜುನನ ತೀರ್ಥಯಾತ್ರೆಯ ಸಮಯದಲ್ಲಿ ಶರಸೇತು ಬಂಧದ ಪ್ರಸಂಗ ಬರುವುದು. (ಅರ್ಜುನ ಮತ್ತು ಅಂಜನೆಯರ ಯುದ್ಧ.) ಇದರ ಬಗ್ಗೆಯೂ ಪ್ರಸ್ಥಾಪವಾಗಿಲ್ಲ. ಇದು ಮೂಲ ಕುಮಾರವ್ಯಾಸ ಭಾರತದಲ್ಲಿಲ್ಲವೋ ಅಥವಾ ಗದ್ಯಾನುವಾದದಲ್ಲಿಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ಈ ಬಗ್ಗೆ ವಿವರಿಸುತ್ತಾರೋ ಎಂದು ಕಾಡು ನೋಡಬೇಕಿದೆ.

Friday, April 15, 2011

ಹುಲಿಯ ಜೀವನ

ಹುಲಿಗಳೆಂದರೆ ನನಗೆ ಬಹಳ ಇಷ್ಟ. ಹುಲಿಗಳೊಂದೆ ಅಲ್ಲ, ಎಲ್ಲ ಪ್ರಾಣಿಗಳು ನನಗೆ ಇಷ್ಟ. ಆದರೆ ಮರ್ಜಾಲಗಳ ಮೇಲಿನ ಅಧ್ಯಯನ ತಕ್ಕಮಟ್ಟಿಗೆ ಇದೆ. ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಮುಂತಾದವರ ನರಭಕ್ಷಕ ಹುಲಿ, ಚಿರತೆಗಳ ಬೇಟೆಗಳ ಸುಮಾರು ಎಲ್ಲ ಪುಸ್ತಕಗಳನ್ನೂ ಓದಿದ್ದೇನೆ. ಇತ್ತೀಚಿಗೆ ಉಲ್ಲಾಸ ಕಾರಂತ್ ರವರ "ಹುಲಿಯ ಬದುಕು" ಎನ್ನುವ ಪುಸ್ತಕ ಓದಿದೆ. ಇದು ಯಾವುದೇ ಬೇಟೆಯ ಕಥೆಯಲ್ಲ. ಬದಲಾಗಿ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ಮತ್ತು ನಮ್ಮ ರಾಷ್ಟ್ರೀಯ ಪ್ರಾಣಿಯಾದ ಹುಲಿಯನ್ನು ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವ ಬಗೆಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡುವ ಒಂದು ಗ್ರಂಥ. (ಮೂಲ: "The Way of The Tiger" by "Dr. K Ullas Karanth", ಅ:"ಹುಲಿಯ ಬದುಕು" )

ಮೊನ್ನೆ ಮೊನ್ನೆ ನಡೆದ ಹುಲಿಗಳ ಗಣತಿಯ ವಿಧಾನವನ್ನು ಭಾರತ ಸರ್ಕಾರ ಬಹಿರಂಗಪಡಿಸಿಲ್ಲ. ಕೇವಲ ಹುಲಿಗಳ ಸಂಖ್ಯೆ 2007 ರ 1411 ರಿಂದ 1636 ( 1706 ಬಾಂಗ್ಲಾದೇಶದೊಂದಿಗೆ ಹೊಂದಿಕೊಂಡಿರುವ ಸುಂದರ್ ಬನ್ ಹುಲ್ಲುಗಾವಲನ್ನೂ ಸೇರಿಸಿ, ಏಕೆಂದರೆ ಹಿಂದಿನ ಗಣತಿ ಸುಂದರ್ ಬನ್ ಹುಲ್ಲುಗಾವಳನ್ನು ಒಳಗೊಂಡಿಲ್ಲ) ಕ್ಕೆ ಹೆಚ್ಚಿದೆ. ಆದ್ದರಿಂದ ಈ ಸಂಖ್ಯೆಯ ನಿಖರತೆ ಬಗ್ಗೆ ಉಲ್ಲಾಸ ಕಾರಂತ್ ರವರೂ ಸೇರಿದಂತೆ ಪ್ರಖ್ಯಾತ ಜೀವ ವಿಜ್ಞಾನಿಗಳು ಸಂದೇಹ ವ್ಯಕ್ತಪಡಿಸಿದ್ದಾರೆ.

ಅದೇನೇ ಇರಲಿ, ಅಭಿವೃದ್ಧಿಯ ಹೆಸರಿನಲ್ಲಿ ಮತ್ತು ಹೆಚ್ಚಿದ ಜನಸಂಖ್ಯೆ ಮತ್ತವರ ಅವಶ್ಯಕತೆಗಳಿಗಾಗಿ ಹುಲಿಯ ಆವಸವಾದ ಕಾಡುಗಳ ನಾಶ, ವಿವಿಧ ಕಾರಣಗಳಿಗಾಗಿ ಹುಲಿಯ ಮತ್ತು ಹುಲಿಯ ಬಲಿಪ್ರಾಣಿಗಳ ಕಳ್ಳ ಬೇಟೆ, ಕಾಡ್ಗಿಚ್ಚು, ಹೀಗೆ ಅನೇಕ ಕಾರಣಗಳಿಂದ ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿದೆ ಎಂಬುದಂತೂ ನಿಜ. ಈ ಸಂದರ್ಭದಲ್ಲಿ ಕನಿಷ್ಠ ಇನ್ನು ಮುಂದಾದರೂ ಏನು ಮಾಡಿದಲ್ಲಿ ಹುಲಿಗಳು ಗಮನಾರ್ಹವಾಗಿ ಹೆಚ್ಚಾಗಬಹುದು ಎಂದು ತಿಳಿಯಲು 40 ನಿಮಿಷದ ಈ ಕಿರುಚಿತ್ರವನ್ನು (documentary) ತಪ್ಪದೆ ವೀಕ್ಷಿಸಿ.

Friday, March 25, 2011

ಶ್ರೀರಂಗಪಟ್ಟಣದ ಭಟ್ಟರ "ಮಂತ್ರ"

ಕಳೆದ ವಾರ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಹೋಗಿದ್ವಿ.ಆ ಪ್ರವಾಸದ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ. ಆದರೆ ಅಲ್ಲಿ ನಡೆದ ಒಂದು ಪ್ರಸಂಗದ ಬಗ್ಗೆ ನಾನೀಗ ಬರೆಯಬೇಕಾಗಿದೆ.

ನಾನು ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡದೇ ಬರೇ ದೇವಸ್ಥಾನ ನೋಡಿಕೊಂಡು ಬಂದದ್ದು ಬೇಕಷ್ಟಿದೆ. ನನಗೆ ದೇವಾಲಯದ ಶಿಲ್ಪಿ ಕಲೆಗಳೇ ಬಹಳ ಮೆಚ್ಚುಗೆಯಾಗುತ್ತವೆ. ಮಧುರೈಗೆ ಹೋಗಿ ಮೀನಾಕ್ಷಿ ದೇವಸ್ಥಾನದ ಒಳಭಾಗದಲ್ಲೆಲ್ಲ ತಿರುಗಾಡಿ ಮೀನಾಕ್ಷಿ ಮೂರ್ತಿ ನೋಡದೆ ಬಂದಿದ್ದೇನೆ. ಕನ್ಯಾಕುಮಾರಿಗೆ ಹೋದಾಗ, ಅಲ್ಲಿನ ದೇವಸ್ಥಾನಕ್ಕೆ ಹೋಗಿ, ಕನ್ಯಾಕುಮಾರಿಯ ದರ್ಶನವನ್ನೇ ಮಾಡದೆ ಬಂದಿದ್ದೇನೆ. ಸರಿ, ಮತ್ತೆ ಮತ್ತೆ ಹೀಗಾಗುವುದು ಬೇಡ ಈ ಸಲ ಎಷ್ಟು ಸಾಧ್ಯವೋ ಅಷ್ಟು ಒಳಗೆ ಹೋಗಬೇಕು ಅಂದು ನಿರ್ಧರಿಸಿದೆ. ದೇವಸ್ಥಾನದಲ್ಲಿ ಸುಮಾರು ಒಳಭಾಗದವೆರೆಗೂ ಸಾರ್ವಜನಿಕರಿಗೆ ಪ್ರವೇಶವಿದೆ. ಪವಡಿಸಿರುವ ರಂಗನಾಥ ಸ್ವಾಮಿ ವಿಗ್ರಹವಿರುವ ಗುಡಿ (ಗರ್ಭ ಗುಡಿ) ಗೆ ಮಾತ್ರ ಪ್ರವೇಶವಿಲ್ಲ. ಆದರೆ ತುಂಬಾ ಹತ್ತಿರದವೆರೆಗೂ ಹೋಗಬಹುದು.

ಹಾಗೆ ಮೊನ್ನೆ ಹೋಗಿ ಸಾಲಿನಲ್ಲಿ ನಿಂತಿದ್ದೆವು. ನಮ್ಮ ಮುಂದೆ ಇದ್ದವ ಒಬ್ಬ ಮೊಬೈಲ್ ನಿಂದ ಫೋಟೋ ಕ್ಲಿಕ್ಕಿಸಿದ. ಫೋಟೋ ತೆಗೆಯುವುದನ್ನು ನಿಷೇಧಿಸಿದೆ ಎಂಬ ಫಲಕ ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಅಲ್ಲಿ ಎಲ್ಲ ಕಡೆ ಹಾಕಲಾಗಿದೆ. ಆದುದರಿಂದ ಫೋಟೋ ತೆಗೆದವನದ್ದೆ ತಪ್ಪು ಎಂದು ಯಾರಾದರು ಹೇಳಬಹುದು. ಆದರೆ ಅಲ್ಲಿಯ ಭಟ್ಟ (ಅರ್ಚಕರು ಎನ್ನದೆ ಯಾಕೆ ಭಟ್ಟ ಅಂತ ಕೆರೆಯುತ್ತಿದ್ದೇನೆ ಎಂದು ಕ್ರಮೇಣ ನಿಮಗೆ ತಿಳಿಯುತ್ತದೆ) ಫೋಟೋ ತೆಗೆದವನ ಹತ್ತಿರ ಬಂದ. ಬಂದು ಫೋಟೋ ಅಳಿಸು ಎಂದು ಆದೇಶಿಸಿದ. ಇವನು ಆಮೇಲೆ ಅಳಿಸುತ್ತೇನೆ ಎಂದ. ಭಟ್ಟ ಈಗಲೇ ಎನ್ನುವುದು ಇವನು ಆಮೇಲೆ ಎನ್ನುವುದು, ಹೀಗೆ ಸಾಗಿತು ಅವರ ಮಾತು. ಮಾತಿಗೆ ಮಾತು ಸೇರಿ ಕೈ ಕೈ ಮಿಲಾಯಿಸುವ ಹಂತವೂ ಬಂತು. ಮಿಲಾಯಿಸಿದ್ದೂ ಆಯಿತು! ನಾವೆಲ್ಲ ಸಾಲಿನಲ್ಲಿ ಕಾಯುತ್ತ ಇದ್ದೇವೆ. ಆಮೇಲೆ ಆ ಭಟ್ಟ, ಹೊಡೆದಾಡಿ ಮೊಬೈಲ್ ಕಸಿದುಕೊಂಡೇ ಬಿಟ್ಟ! ಅದನ್ನು ಎತ್ತಿ ಬಿಸಾಕಿ ಮುರಿದದ್ದೂ ಆಯಿತು. ಅಲ್ಲೆಲ್ಲ ಸೆಕ್ಯೂರಿಟಿಯವರು ಇದ್ದಾಗ ಈ ಭಟ್ಟನಿಗೆ ಈ ರೀತಿ ಹೊಡೆದಾಡುವುದು ಬೇಕಿರಲಿಲ್ಲ ಎಂದು ನಾವು ಮಾತನಾಡಿಕೊಳ್ಳುತ್ತಿರಬೇಕಾದರೆ, ಆ ಭಟ್ಟ ಕೈಯಲ್ಲಿ ಆರತಿ-ಕುಂಕುಮದ ತಟ್ಟೆ ಹಿಡಿದುಕೊಂಡು, ಗರ್ಭ ಗುಡಿಯ ಬಾಗಿಲಲ್ಲಿ ನಿಂತು, "ಬೋಳಿಮಗನೆ, ಫೋಟೋ ತೆಗಿಬಾರ್ದು ಅಂತ ಗೊತ್ತಾಗಲ್ವ ನಿಂಗೆ? ಬೋಳಿಮಗನೆ, ಕೋಣ ಬೆಳೆದಂಗೆ ಬೆಳೆದಿದ್ದಿಯ!" ಎಂದು ಕೆಳಮಟ್ಟದ ಶಬ್ದ ಬಳಸುವುದೇ?! ನಮಗೋ ಭಕ್ತಿ ಎಲ್ಲ ಹೊರಟು ಹೋಗಿ ನಮಸ್ಕರಿಸಲೂ ಮನಸ್ಸು ಬರಲಿಲ್ಲ. ಆ ಭಟ್ಟನ ಭಾಷೆಗೆ ಬೈಯುತ್ತ ಹೊರಬಂದೆವು.

Friday, March 4, 2011

ಚಿಕ್ಕಂದಿನಲ್ಲಿ ಊರಿನಲ್ಲಾಡಿದ ಆಟಗಳು

ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಲವಾಟ ಊರಿನವನು. ತಲವಾಟ ಹೆಸರು ಹೇಗೆ ಬಂತು? ಗೊತ್ತಿಲ್ಲ, ಇರಲಿಬಿಡಿ. ಮಲೆನಾಡಿನ ಕೇಂದ್ರವಾದ ಇದು ಯಾವುದೇ ಮಲೆನಾಡಿನ ಹಳ್ಳಿಗಳಂತೆ ಒಂದು ಹಳ್ಳಿ. ನಾನು ಹುಟ್ಟಿದ್ದು ಬೆಳೆದಿದ್ದು ಎಲ್ಲ ಸರಿಸುಮಾರು ಇಲ್ಲೇ. ಈಗ ಇರುವುದು ಮಾತ್ರ, ಉದ್ಯೋಗ ಅರಸಿ ಬಂದ, ಬೆಂಗಳೂರಿನಲ್ಲಿ. ನಮ್ಮ ಬೀದಿಯಲ್ಲಿ ತುಂಬಾ ಚಿಕ್ಕ ಮಕ್ಕಳಿದ್ದಾರೆ. ಆದರೆ ಅವರಿಗೆ ಆಟವಾಡಲು ಜಾಗವೇ ಇಲ್ಲ! ಸುಮ್ಮನೆ ಹೀಗೆ ಯೋಚಿಸುತ್ತ ಕುಳಿತಿರಬೇಕಾದರೆ, ನಾನು ಯಾವ್ಯಾವ ಆಟ ಆಡಿದ್ದೆ ಊರಿನ ಅಂಗಳ ರಸ್ತೆಗಳಲ್ಲಿ ಎಂದು ನೆನಪು ಮಾಡಿಕೊಳ್ಳುತ್ತ ಹೋದೆ. ಹಾಗೆಯೇ ಗೀಚಿದೆ. ತಾವು ಬೇರೆ ಆಟಗಾಳನ್ನಾಡಿದ್ದಲ್ಲಿ, ಅದನ್ನು ತಿಳಿಸಲು ಸ್ವಾಗತವಿದೆ. ಈಗ ಊರಲ್ಲಿರುವ ಮಕ್ಕಳು ಇವನ್ನೆಲ್ಲ ಆಡುತ್ತಾರೋ ಇಲ್ಲವೋ ನನಗೆ ಗೊತ್ತಿಲ್ಲ.

ಸದ್ಯಕ್ಕೆ ಇಷ್ಟೇ ನೆನಪಾಗುತ್ತಿವೆ,
- ಕ್ರಿಕೆಟ್
- ಚಿನ್ನಿ ದಾಂಡು
- ಲಗೋರಿ
- ಗೋಲಿ
- ಬುಗುರಿ
- ನೆಲಕೋತಿ (ಕಲ್ಲು ಸಗಣಿ ಅಂದರೂ ಇದೇ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ)
- ಮರಕೋತಿ
- ಚಿಬ್ಬಿ (ಕುಂಟಬಿಲ್ಲೇ)
- ಸಿಕ್ಕರ ಚೆಂಡು (ರಾಮನ ಚೆಂಡು ಭೀಮನ ಚೆಂಡು)
- ಕಂಬ ಕಂಬದಾಟ
- ಕಣ್ಣ ಮುಚ್ಚೆ ಕಾಡೇ ಗೂಡೆ
- ಜೂಟಾಟ
- ಕುಂಟಾಟ
- ಕಳ್ಳ ಪೊಲೀಸ್  
- ಕಬಡ್ಡಿ
- ಕೊಕ್ಕೋ

ಇವಲ್ಲದೇ, ತೋಟ, ಬೆಟ್ಟ, ಗುಡ್ಡ, ಬ್ಯಾಣ ಅಲೆಯುವುದಂತೂ ಇದ್ದೇ ಇತ್ತು.

ಒಮ್ಮೊಮ್ಮೆ ನಮ್ಮ ಪಾಲಕರು ಕಲ್ಪಿಸಿದ ಪರಿಸರವನ್ನು ನಾವು ನಮ್ಮ ಮಕ್ಕಳಿಗೆ ಕಲ್ಪಿಸಲಾಗುವುದಿಲ್ಲವಲ್ಲ ಎಂಬ ಕೊರಗು ಉಂಟಾಗುತ್ತದೆ. ಅಥವಾ ಈಗಿನ ಉದ್ಯೋಗ ಬಿಟ್ಟು ತವರೂರಿಗೆ ವಾಪಾಸಾಗಬೇಕು!