Thursday, February 16, 2012

ನಮ್ಮನೆಯ ಪಾರಿ ......

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎಲ್ಲ ಮನೆಯ ಕಿಟಕಿಯಲ್ಲೂ ಪಾರಿವಾಳಗಳು ವಾಸ್ತವ್ಯ ಹೂಡಿರುತ್ತವೆ. ಹಾಗೆಯೆ ನಮ್ಮನೆಯ ಅಡಿಗೆ ಮನೆಯ ಕಿಟಕಿ ಹಾಗು ಬಚ್ಚಲ ಮನೆ ಕಿಟಕಿಯಲ್ಲಿ ದಿನದ ಇಪ್ಪತ್ನಾಕು ಗಂಟೆಯೂ ಕಪ್ಪು, ಬಿಳಿ ಹೀಗೆ ಒಂದಲ್ಲ ಒಂದು ಪಾರಿವಾಳ ಇದ್ದೆ ಇರುತ್ತದೆ.


ಬೆಳಿಗ್ಗೆ ೫ ಗಂಟೆಗೇ ಗೂಂ... ಗೂಂ... ಅಂತ ಕೂಗಲು ಶುರು, ಸ್ವಲ್ಪ ಹೊತ್ತಿಗೆ ಫೈಟಿಂಗ್ ಕೂಡ ಶುರು ಆಗುತ್ತೆ. ಒಂದಕ್ಕೊಂದು ಕೊಕ್ಕಿನಿಂದ ಕುಕ್ಕಿ ರೆಕ್ಕೆಯನ್ನು ಬಡಿಯುತ್ತ ನಮ್ಮ ನಿದ್ದೆಯನ್ನು ಹಾಳು ಮಾಡುತ್ತೆ! ಅದು ಜೋಡಿ ಪಾರಿವಾಳಗಳ ಫೈಟಿಂಗ್ ಗೋ ಅಥವಾ ಸರಸ-ಸಲ್ಲಪವೋ ನಮಗೆ ಇದುವರೆಗೂ ತಿಳಿದಿಲ್ಲ.!!!  :-)

 ಮೊದಮೊದಲು ಪಾರಿವಾಳಗಳನ್ನು ನೋಡಿದರೆ ನಂಗೆ ಸಿಟ್ಟು ಬರ್ತಿತ್ತು. ನಿದ್ದೆ ಮಾಡಕ್ಕೆ ಬಿಡಲ್ಲ, ಯಾವಾಗಲು ಕಿಟಕಿಯ ಗಾಜಿಗೆ ರೆಕ್ಕೆಯಿಂದ ಬಡಿಯುತ್ತ ಶಬ್ದ ಮಾಡುತ್ತೆ, ಆಗ ಉದುರುವ ರೆಕ್ಕೆಯ ಪುಕ್ಕ ಒಮ್ಮೊಮ್ಮೆ ಕಿಟಕಿ ತೆಗೆದಾಗ ಒಳಗೆ ಬರುತ್ತೆ ಛೀ...ಕೊಳಕು ಅಂತೆಲ್ಲ.. ಆದ್ರೆ ದಿನ ಕಳೆಯುತ್ತಾ ಅದು ಒಂಥರಾ ಇಷ್ಟ ಆಯಿತು! ಯಾವಾಗಲು ಮುಚ್ಚೆ ಇರ್ತಿದ್ದ ಕಿಟಕಿನ ತೆಗೆಯೋಕೆ ಶುರು ಮಾಡಿದೆ!

ಕಾಗೆಗಳಿಂದ ಬಚಾವಾಗಲು ಅವು ಮನುಷ್ಯರ ಸುತ್ತಮುತ್ತಾನೆ ಇರುತ್ತೆ. ಸುಮಾರು ಎಲ್ಲ ಸಣ್ಣ ಪಕ್ಷಿಗಳು ಕಾಗೆಗೆ ಹೆದರುತ್ತವೆ. ಪಾರಿವಾಳ ಕೂಡ. ಮನುಷ್ಯರನ್ನ ಕಂಡ್ರೆ ಅದಕ್ಕೆ ಭಯ ಇಲ್ಲ. ಮುಟ್ಟಲು ಹೋದರೆ ಮಾತ್ರ ಹಾರಿ ಹೋಗುತ್ತೆ.. ನಮ್ಮನೆ ಅಡುಗೆ ಮನೆಯ ಕಿಟಕಿಯ ಸರಳು ತುಂಬಾ ಚಿಕ್ಕದಿರುವುದರಿಂದ ಅದಕ್ಕೆ ಒಳಗೆ ಬರಲು ಸಾದ್ಯವಿಲ್ಲ, ಆದರೂ ಅಲ್ಲಿಂದ ಕುತ್ತಿಗೆಯನ್ನು ಮಾತ್ರ ಒಳಗೆ ಹಾಕಿ ಅಡುಗೆ ಮನೆಯನ್ನೆಲ್ಲ ನೋಡುತ್ತೆ. ಅದು ಹಾಗೆ ನೋಡುವುದನ್ನು ನೋಡಲು ಮಜಾ. ನಾನು ಅಡುಗೆ ಮನೆಯಲ್ಲಿ ಇಲ್ಲದ ಸಮಯ ನಿಧಾನ ಕತ್ತು ಒಳಗೆ ಹಾಕಿ ಪರಿವೀಕ್ಷಣೆ ನಡೆಸಿರುತ್ತೆ! :-) ಇದುವರೆಗೂ ಕಾಳು ಹಾಕುವ ಸಾಹಸ ಮಾಡಿಲ್ಲ. ಆದರೆ "ಪಾರಿ" ಎಂಬ ನಿಕ್ಕ್ ನೇಮ್ ಇಟ್ಟಿದೇವೆ. ದಿನಕ್ಕೊಮ್ಮೆ ಪಾರಿಯನ್ನು ಮಾತನಾಡಿಸುವುದನ್ನು ಮಿಸ್ ಮಾಡೋಲ್ಲ!


Wednesday, January 18, 2012

ವೀಕ್ ಡೇ ಲಿ ರಜ ಹಾಕುವ ಮಜಾ.......

ಇವತ್ತು ಆಫೀಸ್ ಇದೆ ಆದ್ರೆ ನಾನು ಹೋಗ್ತಾ ಇಲ್ಲ ಅನ್ನೋ ಫೀಲಿಂಗ್ ಇದ್ಯಲ ಅದ್ನ ಹೇಳೋಕೆ ಆಗಲ್ಲ, ನೀವು ಅನುಭವಿಸಿ ನೋಡ್ಬೇಕು.

ಗಂಡ ಎಂದಿನಂತೆ ಎದ್ದು ಗಡಿಬಿಡಿಲಿ ಟೀ ಕುಡ್ದು ಲೇಟ್ ಆಯಿತು ಅಂತ ಗಾಬರಿ ಇಂದ ಸ್ನಾನಕ್ಕೆ ಓಡ್ತಾ ಇರೋವಾಗ ನೀವು ಆರಾಮಾಗಿ ಪೇಪರ್ ಓದ್ತಾ ಟೀ ನ ಆಸ್ವಾದಿಸ್ತ ಆಫೀಸ್, ಕೆಲಸ ಎಲ್ಲ ಮರೆತು ಕೂರೋದು ಒಂಥರಾ ಮಜಾ...

ಹೀಗೆ ಆಫೀಸ್ ಗೆ ರಜ ಗುಜರಾಯಿಸಿ ಮನೆಲಿ ಕೂತರೆ ನಿಮ್ಮೊಳಗಿನ ಕಲೆ, ಕವಿತ್ವ, ಸೃಜನಶೀಲತೆ  ಎಲ್ಲ  ಜಾಗೃತ ಆಗುತ್ತೆ! ಸ್ವಂತ ಅನುಭವದ ಮಾತು. ಸ್ಕೂಲ್ ನಲ್ಲೋ ಕಾಲೇಜ್ ನಲ್ಲೂ ಹಾಕ್ತ ಇದ್ದ ಎಂಬ್ರೋಯಿಡರಿ ನೆನಪಾಗಿ ಅದ್ನ ಮಾಡೋದು ನೆನಪಿದೆಯ ಅಥವಾ ಮರೆತು ಹೋಗಿದ್ಯ ನೋಡೋಣ ಅಂತ ಪ್ರಯೋಗ ಶುರು ಮಾಡ್ತೀರಿ. ಆಗ ಮಾಡ್ತಾ ಇದ್ದ ಬಟ್ಟೆಯ ಹೂವು, ಬಣ್ಣದ ಹಾಳೆಯ ಹೂವು,  socks Clothನ ಹೂವು ಹೇಗೆ ಮಾಡೋದು ಅಂತ ಯೋಚನೆ ಮಾಡಿ ಮಾಡಿ ಅಂತು ಸಂಜೆ ಗಂಡ ಮನೆಗೆ ಬರೋ ಹೊತ್ತಿಗೆ ಒಂದು ಸುಂದರ ಹೂವು ತಯಾರಾಗುತ್ತೆ! ದಿನ ಕೆಲಸ ಮುಗಿಸಿ ಮನೆಗೆ ಬಂದು ಮಾಡ್ತಾ ಇದ್ದ ಗೊಡ್ಡು ಸಾರಿನ ಬದಲಿಗೆ ರುಚಿಕರ ಅಡುಗೆ ರೆಡಿ ಆಗುತ್ತೆ. ಬೋಂಡ-ಬಜ್ಜಿ ಅಥವಾ ಸ್ವೀಟ್ ಏನಾದ್ರು ಮಾಡಿ, ನಿಮ್ಮನ್ನ ಕಾಡ್ತಾ ಇದ್ದ ಗಿಲ್ಟ್ ಫೀಲ್ ಇಂದ ಒಂದಿನಕ್ಕೆ ಮುಕ್ತಿ ಪಡೀತಿರಿ!

ನಾನೂ ಹೀಗೆ ರಜ ಹಾಕಿ ಎಂಜಾಯ್ ಮಾಡ್ತಾ ಇರೋವಾಗ ಅರಳಿದ ಕಲೆಯ ಫೋಟೋ....




ಮುಸ್ಸಂಜೆ ಹೊತ್ತಿಗೆ ಟೆರೇಸಿನ ಮೇಲೆ ಟೀ ಕುಡಿತ ಹವಾ ಸೇವನೆ ಮಾಡೋವಾಗ ದಿನ ನಿತ್ಯ ಮುಳುಗುವ ಸೂರ್ಯ, ಹಕ್ಕಿಗಳು ಗೂಡು ಸೇರುವ ದೃಶ್ಯ, ಅವುಗಳ ಚಿಲಿಪಿಲಿ ಎಲ್ಲ ಹೊಸತಾಗಿ ಕಾಣ್ಸುತ್ತೆ. ಪ್ರಕೃತಿ ಸೌಂದರ್ಯದ ಬಗ್ಗೆ ಎಂದೂ ಇಲ್ಲದ ಒಲವು ಮೂಡುತ್ತೆ!! ಅಂತೂ ಒಂದಿನ ರಜ ಹಾಕಿದರೆ ಮಜಾ ಗ್ಯಾರಂಟಿ. ಜಾಸ್ತಿ ದಿನ ಹೀಗೆ ಇರೋದು ಅಂದ್ರೆ ಸಜಾ ಗ್ಯಾರಂಟಿ!! ....

Monday, January 2, 2012

K-dies ಸೀಟ್!!

ಒಂದಿನ ನಾನು, ಶಣ್ಣಿ ಮತ್ತು ಯದು ಬಿಎಂಟಿಸಿ ಬಸ್ಸಿನಲ್ಲಿ ಹೊರಟಿದ್ದೆವು. ಮೆಜಸ್ಟಿಕ್ ನಲ್ಲಿ ಬಸ್ ಹತ್ತಿ ಸೀಟ್ ಹಿಡಿದು ಕುಳಿತು ನಮ್ಮ ಪ್ರಯಾಣ ಎಷ್ಟು ತಾಸಿನದ್ದಿರಬಹುದು ಎಂದು ಚರ್ಚಿಸಿ, ಸುಮಾರು ಒಂದೂವರೆ ತಾಸು ಆಗಬಹುದೆಂದು ನಿರ್ಧರಿಸಿದ ಮೇಲೆ ಹೇಗೆ ಟೈಮ್ ಪಾಸು ಮಾಡೋದು ಗೊತ್ತಾಗ್ಲಿಲ್ಲ. ಆಚೆ ಈಚೆ ನೋಡ್ತಾ, ಬೇಕಾದ- ಬೇಡದ ವಿಷಯಗಳ ಬಗ್ಗೆ ಹರಟೆ ಹೊಡಿತ ಕೂತಿದ್ವಿ. ಹಾಗೆ ನೋಡ್ತಾ ನಮ್ಮ ಕಣ್ಣು ಮುಂದಿನ ಸೀಟ್ ನ ಮೇಲೆ ಹೋಯ್ತು. ಮಹಿಳೆಯರಿಗಾಗಿ ಕಾಯ್ದಿರಿಸಿರುವ ಸೀಟ್ ಗಳಲ್ಲಿ "ಸ್ತ್ರೀಯರು" ಎಂದು ಕನ್ನಡದಲ್ಲಿ,  "Ladies"  ಎಂದು ಇಂಗ್ಲಿಷ್ ನಲ್ಲಿ ಬರೆದಿರುತ್ತಾರೆ. ಯಾರೋ ಕಿಡಿಗೇಡಿಗಳು ಅದನ್ನು "Kdies" ಎಂದು ತಿದ್ದಿದ್ದರು!!! :-) ಬೋರ್ ಆಗ್ತಿದ್ದ ನಮಗೆ ಟೈಂಪಾಸ್ ಮಾಡೋಕೆ ವಿಷ್ಯ ಸಿಗ್ತು!


ಆ ಸೀಟ್ ನಲ್ಲಿ ಯಾರೋ ಒಬ್ಬ ಗಂಡಸು ಕೂತಿದ್ದ. ನೋಡೋಕೆ ಕಪ್ಪಗೆ ದಪ್ಪಗೆ ಘಾಟಿ ಅಂತ ಅನ್ನಿಸ್ತಿದ್ದ ಹೆಂಗಸು ಒಬ್ಳು ಬಂದು "ladies" ಸೀಟ್ ಬಿಡ್ರಿ, ಅಂತ ಅವನನ್ನ ಎಬ್ಸಿ ಅಲ್ಲಿ ಕೂತಳು. ಕೇಡಿಸ್ ಸೀಟ್ ನಲ್ಲಿ ಬಂದು ಕೂತ ಅ ಹೆಂಗಸನ್ನು (ಕೇಡಿ ??!!) ನೋಡಿ ನಾವು ಕಾಮೆಂಟ್ ಮಾಡ್ತಾ, ಮುಸಿ ಮುಸಿ ನಗ್ತಾ ಟೈಂಪಾಸ್ ಮಾಡ್ತಾ ಇದ್ವಿ. ಆ ಹೆಂಗಸು ಇಳಿದ ಮೇಲೆ ಆ ಸೀಟ್ ಗೆ ತುಂಬಾ ಸ್ಟೈಲ್ ಆಗಿ ಡ್ರೆಸ್ ಮಾಡ್ಕೊಂಡು ನಖರ ಮಾಡ್ತಾ, ಜಗತ್ತಿನಲ್ಲಿ ಅವರನ್ನ ಬಿಟ್ರೆ ಬೇರೆ ಯಾರು ಸುಂದರಿಯರು ಇಲ್ಲ ಅನ್ಕೊಂಡಿರೋರ ಹಾಗೆ ಪೋಸ್ ಕೊಡ್ತಾ ಇದ್ದ ೨ ಜನ ಹುಡುಗಿಯರು ಬಂದು ಕೂತರು. ನಮಗೋ ಮತ್ತೂ ನಗು........ ಮತ್ತಷ್ಟು ಹೊತ್ತು ಅವರ ಬಗ್ಗೆ ಮಾತಾಡ್ಕೊಂಡು ಟೈಮ್ ಪಾಸು ಮಾಡಿದ್ವಿ.


ಸರಿ, ನಮ್ ಸ್ಟಾಪ್ ಬಂತು. ಇಳಿಬೇಕು ಅಂತ ಎದ್ದು ನಿತ್ಕೊಂದ್ವಿ, ಆಗ ಯದು " ರಂಜನಕ್ಕ, ನಿಂಗಳ ಸೀಟ್ ಮೇಲೆ ಯಂತ ಬರ್ಕಯ್ನ್ದು ನೋಡು" ಅಂತ ಜೋರ್ ನಗೋಕೆ ಶುರು ಮಾಡಿದ! ನೋಡ್ತೀನಿ..... ನಾನು,ಶಣ್ಣಿ ಅಷ್ಟೊತ್ತು ಕುಳಿತಿದ್ದ ಸೀಟ್ ಮೇಲೆ ಕೂಡ "Kdies" ಅಂತಾನೆ ಬರೆದಿತ್ತು!!