Saturday, August 20, 2011

ದೇವದೇವರ ಮಹಾದೇವ ಸೂರ್ಯದೇವ

ಹೆಚ್ಚಿನ ನಾಗರಿಕತೆಗಳ ಪ್ರಕಾರ ಸೂರ್ಯ ದೇವನೇ ಎಲ್ಲರಿಗಿಂತ ಪ್ರಮುಖ ದೇವರು. ಪ್ರಖ್ಯಾತ ಈಜಿಪ್ಟ್ ಪುರಾಣದ ಪ್ರಕಾರ "ರ" ಎಂದು ಕರೆಸಿಕೊಳ್ಳುತ್ತಿದ್ದ ಸೂರ್ಯ ಅವರಿಗೆ ದೇವರಾಗಿದ್ದನು. "ರ" ಆಕಾಶದಲ್ಲಿ ದೋಣಿಗಳಲ್ಲಿ ಸಾಗುತ್ತಾನೆ ಎಂದು ಈಜಿಪ್ಟ್ ನಾಗರಿಕತೆ ಹೇಳುತ್ತದೆ. ರೋಮನ್ ಸಾಮ್ರಾಜ್ಯದಲ್ಲಿ "ಸೋಲ್ ಇನ್ವಿಕ್ಟಸ್" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಜರ್ಮನ್ ಪುರಾಣದ ಪ್ರಕಾರ ಸೂರ್ಯದೇವನು "ಸೋಲ್" ಎಂದು ಕರೆಯಿಸಿಕೊಳ್ಳುತ್ತಿದ್ದನು. ಗ್ರೀಕ್ ಪುರಾಣದಲ್ಲೂ ಕೂಡ ಸೂರ್ಯದೇವನು ಪ್ರಮುಖನು. ಅವನನ್ನು "ಹೀಲಿಯೋಸ್", "ಟೈಟನ್", ಮತ್ತು "ಅಪೋಲೋ" ಎಂಬುದಾಗಿ ಕರೆಯುತ್ತಿದ್ದರು. ಪುರಾತನ ನಾಗರಿಕತೆ ಮೆಸೊಪೊಟೊಮಿಯಾದಲ್ಲಿ "ಶಮಶ್" ಎಂದು ಕರೆಯಲಾಗುತ್ತಿದ್ದ ಸೂರ್ಯದೇವನು ಪ್ರಮುಖ ದೇವನು. ದಕ್ಷಿಣ ಅಮೇರಿಕಾದ ಪ್ರಸಿದ್ಧ ನಾಗರಿಕತೆ ಇನ್ಕಾದಲ್ಲಿ "ಇಂತಿ" ಎಂದು ಸೂರ್ಯದೇವನನ್ನು ಕರೆಯುತ್ತಿದ್ದರು. ಹೀಗೆ ಉದಾಹರಿಸುತ್ತ ಹೋದರೆ ಸೂರ್ಯನೇ ಪ್ರಮುಖ ದೇವನಾದ ಇನ್ನೂ ಹಲವಾರು ನಾಗರಿಕತೆಗಳು, ಪುರಾಣಗಳು ಸಿಕ್ಕುತ್ತವೆ.

ಹಿಂದೂ ಪುರಾಣದಲ್ಲೂ ಸೂರ್ಯದೇವ ಪ್ರಮುಖ ದೇವರುಗಳಲ್ಲೊಬ್ಬ. ಆದರೆ ಎಲ್ಲರಿಗಿಂತ ಮಿಗಿಲು ತ್ರಿಮೂರ್ತಿಗಳಾದ ಹರಿ, ಹರ, ವಿರಿಂಚಿಗಳು (ಬ್ರಹ್ಮ), ಎಂದು ನಾನಂದುಕೊಂಡಿದ್ದೆ! ಈ ಅಭಿಪ್ರಾಯಕ್ಕೆ ಧಕ್ಕೆಬರುವಂತ ರೀತಿಯಲ್ಲಿ ಕುಮಾರವ್ಯಾಸ ಭಾರತದಲ್ಲಿ ಬರೆಯಲಾಗಿದೆ. ಅರಣ್ಯಪರ್ವದ ೭ ನೇ ಸಂಧಿಯಲ್ಲಿ ಅರ್ಜುನನನ್ನು ಇಂದ್ರನ ಆಸ್ಥಾನಕ್ಕೆ ಕರೆದೊಯ್ಯುತ್ತ ಇಂದ್ರಸಾರಥಿ ಮಾತಲಿಯು ಅರ್ಜುನನಿಗೆ ಭೂಮಿ, ಬೇರೆ ಬೇರೆ ಲೋಕ ಹಾಗೂ ಬ್ರಹ್ಮಾಂಡಗಳ ಬಗ್ಗೆ ವಿವರಿಸುತ್ತಾನೆ. ಆ ಸಂದರ್ಭದಲ್ಲಿ ದಿನಕರನು ಪರಮಾತ್ಮ. ಮಹಾದೇವರಾದ ಹರಿಹರವಿರಿಂಚಿಗಳು ಅತಿ ಬಲವಂತನಾದ ಸೂರ್ಯನನ್ನು ಪ್ರಾರ್ಥಿಸುತ್ತಾರೆ. ಕಾಲವು ರವಿರಥದ ಚಕ್ರ ಎಂದು ಹೇಳುತ್ತಾನೆ. ಸೂರ್ಯ ಎಂದರೆ ಬೆಂಕಿ. ಸುರಪಥಿಯಾದ ದೇವೇಂದ್ರನ ಆಸ್ಥಾನದ ದೇವತೆಗಳಲ್ಲಿ ಒಬ್ಬನಾದ ಅಗ್ನಿ ಎಂದರೂ ಬೆಂಕಿಯೇ. ಅಗ್ನಿ ಇಂದ್ರನಿಗೆ ನಮಿಸಿದರೆ, ಇಂದ್ರ ತ್ರಿಮೂರ್ತಿಗಳಿಗೆ ನಮಿಸುತ್ತಾನೆ ಹಾಗೂ ತ್ರಿಮೂರ್ತಿಗಳಿಗೆ ಸೂರ್ಯನು ದೇವನಾದರೆ, ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ಆಗಬೇಕಾಗುತ್ತದೆ! ಹಾಗಾದರೆ ಅಗ್ನಿ ಮತ್ತು ಸೂರ್ಯ ಬೇರೆ ಬೇರೆ ದೇವರೇ? ಹಿಂದೂ ಧರ್ಮದ ಜಿಜ್ಞಾಸೆಗಳಲ್ಲಿ ಇದೂ ಒಂದೇ?

Monday, August 1, 2011

ನಾಗಲಿಂಗ ಪುಷ್ಪ


ಮಧ್ಯದಲ್ಲಿ ಲಿಂಗ, ಹೆಡೆಯಂತೆ ಅದನ್ನಾವರಿಸುವ ಆಕಾರ, ಈ ಹೂವಿಗೆ ನಾಗಲಿಂಗ ಎಂಬ ಹೆಸರನ್ನು ನೀಡಿದೆ. ಮರದ ಕಾಂಡದಿಂದ ಹೊರಡುವ ಉದ್ದನೆಯ ಬಿಳಲಿನಲ್ಲಿ ಈ ಹೂವು ಅರಳುತ್ತದೆ. ಈ ಲಿಂಗದ ಸುತ್ತಲು ೬ ದಳಗಳು ಅಥವಾ ಹೂವಿನ ಪಕಳೆಗಳು ಇರುತ್ತದೆ.

ಹೂವು ಎಷ್ಟು ಸುವಾಸನೆ ಬೀರುತ್ತದೆಯೋ, ಇದರಲ್ಲಿ ಬಿಡುವ ಕಾಯಿ ಉದುರಿ ಒಡೆದು ಹೋದಾಗ ಅಷ್ಟೇ ದುರ್ವಾಸನೆ ಬೀರುತ್ತದೆ. ಬೆಂಗಳೂರಿನ ಅನೇಕ ರಸ್ತೆಗಳಲ್ಲಿ ಈ ಮರವು ಸಾಲುಮರವಾಗಿ ಕಾಣಸಿಗುತ್ತದೆ. ಇದರ ಕಾಯಿಯ ಗಾತ್ರ ಸಕ್ಕರೆ ಕಂಚಿಯನ್ನು (ಚಕೋತ ಹಣ್ಣು) ಹೋಲುತ್ತದೆ. ಈ ಮರದ ನೆರಳಿನಲ್ಲಿ ನಿಮ್ಮ ಕಾರನ್ನೂ ಬೈಕನ್ನೋ ನಿಲ್ಲಿಸುವಾಗ ಜೋಕೆ! ಕಾಯಿ ಬಿತ್ತೆಂದರೆ ನಿಮ್ಮ ಕಾರಿನ ಗಾಜು ಒಡೆಯಬಹುದು ಅಥವಾ ಡೆಂಟ್ ಆಗಬಹುದು!

ಅಂದ ಹಾಗೆ ಈ ಮರದ ಮೂಲ ದಕ್ಷಿಣ ಅಮೆರಿಕಾದ ಅಮೆಜಾನ್ ಕಾಡು. ಈ ಹೂವಿನಲ್ಲಿ ಮಕರಂದ ಇರುವುದಿಲ್ಲವಂತೆ! ಶಿವನಿಗೆ ಅತ್ಯಂತ ಶ್ರೇಷ್ಠವಂತೆ. ಕೈಲಾಸಪತಿಯೇ ವಿದೇಶಿ ವಸ್ತುವಿಗೆ ಮಾರುಹೋದಮೇಲೆ ನಾವು ವಿದೇಶಿ ವಾಚು, ವಿದೇಶಿ ಬಟ್ಟೆಗಳಿಗೆ ಮರುಳಗುವುದು ಆಶ್ಚರ್ಯವೇನಲ್ಲ ಬಿಡಿ!

Friday, July 22, 2011

ಪಾಂಡವರ ಧರ್ಮದ ಮಧ್ಯೆ ದ್ರೌಪದಿ ವಸ್ತ್ರಾಪಹರಣ

ಬಹಳ ದಿನಗಳ ಹಿಂದೆ ಒಂದು ಪ್ರಶ್ನೆಯನ್ನು ಕೇಳಿದ್ದೆ. ಧರ್ಮರಾಯನಿಗೆ ಶಿಕ್ಷೆ ಎನ್ನುವ ಶೀರ್ಷಿಕೆಯಡಿಯಲ್ಲಿ. ಆ ಪ್ರಶ್ನೆಗೆ ಉತ್ತರಿಸುತ್ತ ಹೊಸಮನೆಯವರು, "ದ್ರೌಪದಿ ಕೂಡ ಜೂಜಿನಲ್ಲಿ ಅವಳನ್ನು ಒತ್ತೆ ಇಟ್ಟಿದ್ದಕ್ಕೆ ಆಕ್ಷೆಪಿಸಲಿಲ್ಲ. ಆದರೆ ತನ್ನನ್ನು ತಾನು ಸೋತ ನಂತರ ಧರ್ಮರಾಯ ಅವಳನ್ನು ಪಣವಾಗಿ ಒಡ್ಡುವುದು ಯಾವ ಧರ್ಮ ಎಂದು ಪ್ರಶ್ನಿಸುತ್ತಾಳೆ" ಎಂದು ಹೇಳಿದ್ದಾರೆ.
ಮೊನ್ನೆ ಮೊನ್ನೆ, ಕುಮಾರವ್ಯಾಸ ಕಥಾಮಂಜರಿಯ ಸಭಾಪರ್ವವನ್ನು ಓದಿ ಮುಗಿಸಿದೆ. ದ್ರೌಪದಿ ವಸ್ತ್ರಾಪಹರಣದ ಸನ್ನಿವೇಶವನ್ನು ಓದಿದಾಗ ಅಂದಿನ ಪ್ರಶ್ನೆ ಮತ್ತೆ ಉದ್ಭವಿಸಿತು. "ತನ್ನನ್ನು ತಾನು ಸೋತ ನಂತರ ಹೇಗೆ ಪರರನ್ನು ಜೂಜಿನಲ್ಲಿ ಒತ್ತೆ ಇಡಲು ಸಾಧ್ಯ? ಇದು ಧರ್ಮವೇ?" ಎಂದು ಕೇಳಿದಾಗ, ಭೀಷ್ಮಾದಿಗಳನ್ನೋಳಗೊಂಡು, ಆಸ್ಥಾನದಲ್ಲಿದ್ದ ಯಾರೂ ಮಾತನಾಡುವುದಿಲ್ಲ. ಇದು ಏಕೆಂದು ನನಗೆ ಗೊಂದಲವಾಯಿತು. ಯೋಚಿಸಿದಾಗ ಒಂದು ಸಾಧ್ಯತೆ ಗಮನಕ್ಕೆ ಬಂತು. ಧರ್ಮರಾಯ ಸೋತಾಗಿತ್ತು. ಕೌರವನ ಕಿಂಕರನಾಗಿಯಾಗಿತ್ತು. ಆ ನಂತರ ಗೆದ್ದವರು ಹೇಳಿದಂತೆ ಅವನು ಕೇಳುವುದು ಧರ್ಮ. ಅವರು ವಡ್ಡು ಏನೆಂದು ಕೇಳಿದರು. ಇವನು ಹೇಳಿದ. ಇವನು ಹೇಳಿದ್ದನ್ನು ಅವರು ಒಪ್ಪಿದರು. ಹಾಗಾಗಿ ಇಲ್ಲಿ ಧರ್ಮದ ಉಲ್ಲಂಘನೆ ಆಗಿಲ್ಲ ಅನ್ನಿಸಿತು.
ಇನ್ನು ಪ್ರಾಣಕ್ಕಿಂತ ಮಾನ ದೊಡ್ಡದು ಎಂದು ಎಷ್ಟೋ ಕಡೆ ಓದುತ್ತೇವೆ, ಕೇಳುತ್ತೇವೆ. ತಮ್ಮ ಪಟ್ಟದರಸಿಯ ಮಾನಕ್ಕೆ ಸಂಚಕಾರ ಬಂದಾಗಲೂ ಧರ್ಮ ಎನ್ನುತ್ತಾ, ಸುಮ್ಮನಿದ್ದ ಧರ್ಮರಾಯಾದಿ ಪಾಂಡವರು ಮಾಡಿದ್ದು ಸರಿಯೇ? ಧರ್ಮ, ಹಾಗಾದರೆ ಮಾನಕ್ಕಿಂತಲೂ ಉನ್ನತವಾದದ್ದೇ! ಇಂದಿಗೂ?!