ಅವನೊಬ್ಬ ಸ್ತಿತಪ್ರಜ್ಞ. ಯಾರೇನೇ ಹೇಳಲಿ, "ಓಹೋ, ಹೌದಾ, ಖುಷಿಯಾಯ್ತು", ಅಥವಾ "ಅಯ್ಯೋ, ಹಾಗಾಗಬಾರದಿತ್ತು" ಎಂದು ಹೇಳುತ್ತಿದ್ದ. ಹಾಗಂತ ಭಾವನೆಗಳಿಲ್ಲ ಅಂತಲ್ಲ, ಆದರೆ, ಇಲ್ಲವೇ ಇಲ್ಲನೆನ್ನುವಷ್ಟು ಕಡಿಮೆ ವ್ಯಕ್ತಪಡಿಸುತ್ತಿದ್ದ. ಅವನು ಏನಾದರೂ ಚಿಂತಿಸುತ್ತಿದ್ದರೆ, ಅಥವಾ ಖುಷಿಯಾಗಿದ್ದರೆ, ಅವನು ಹೇಳಿದರೆ ಮಾತ್ರ ಬೇರೆಯವರಿಗೆ ಗೊತ್ತಾಗುತ್ತಿತ್ತು.
ಎಲ್ಲರ ಜೀವನದಂತೆ, ಅವನ ಜೀವನದಲ್ಲೂ ಒಂದು ಹೆಣ್ಣು ಜೀವದ ಪ್ರವೇಶವಾಯಿತು. ಅವಳು "ನೀನೊಬ್ಬ ಮುಚ್ಚಿದ ಶೀಷೆ, ಮುಚ್ಚಳ ತೆಗೆದಿಡು, ನಿನ್ನನ್ನು ನೀನು ತೆರೆದಿಡಬೇಕು" ಎಂದಳು. "ಹೃದಯ ಸುಗಂಧ ದ್ರವ್ಯದ ಶೀಷೆ, ಮುಚ್ಚಳ ತೆಗೆದರೆ, ಅದರ ಪರಿಮಳ ಹೊರಟು ಹೋಗುತ್ತದೆ" ಎಂದ. "ಆದರೂ ಸ್ವಲ್ಪ ಸ್ವಲ್ಪ ತೆಗೆಯುವೆ, ಇನ್ನುಮುಂದೆ" ಎಂದ.
ಕಾಲಕ್ರಮೇಣ, ಗೊತ್ತೇ ಆಗದಂತೆ, ಭಾವನೆಗಳಿಗೆ ತಕ್ಕಷ್ಟು ಸ್ಪಂದಿಸಲು ಆರಂಭಿಸಿದ. ಮುಂಚೆ ಕಥೆ - ಕಾದಂಬರಿಗಳನ್ನು, ನಿರ್ಲಿಪ್ತನಾಗಿ, ಕೇವಲ ಆಸಕ್ತಿ, ಕುತೂಹಲ ಮತ್ತು ಕಥೆ ಎನ್ನುವ ದೃಷ್ಟಿಯಿಂದ ಮಾತ್ರ ಓದುತ್ತಿದ್ದವ, ಆಮೇಲೆ ಭಾವಪರವಶನಾಗಿ ಓದಲಾರಂಭಿಸಿದ. ದೂರದರ್ಶನ, ಚಲನಚಿತ್ರಗಳಲ್ಲಿ ಅಳುವ ದೃಶ್ಯವಿದ್ದರೆ, ಇಲ್ಲಿ ಇವನ ಕೆನ್ನೆಯ ಮೇಲೆ ಕಣ್ಣೀರು ಧಾರಾಕಾರ ಬರಲಾರಂಭಿಸಿತು. ಭಾವನೆಗಳ ಚಿಲುಮೆಯಾದ. ಅವನ ಚಿಂತಿತನಾಗಿದ್ದಾನೋ, ಖುಷಿಯಾಗಿದ್ದಾನೋ, ಅವನ ಮಿತ್ರರು ಹೇಳಬಲ್ಲವರಾಗಿದ್ದರು!
- ಅವನು ಮುಂಚೆ ಇದ್ದಿದ್ದು ಸರಿಯೇ? ಅಥವಾ ಆಮೇಲೆ ಪರಿವರ್ತನೆಗೊಂಡಿದ್ದು ಸರಿಯೇ?
- ಅಥವಾ ಎರಡೂ ಸರಿಯೇ!? ಇದೆಲ್ಲದರ ಮಿಶ್ರಿಣವೇ ಮಾನವ ಜೀವನವೇ?
- ಮನುಷ್ಯ ಪರಿಪೂರ್ಣವಾಗುವಡೆಗೆ ಎಂದರೇ, ಭಾವನೆಗಳು ಕಾಲಕ್ರಮೇಣ ಕಡಿಮೆ ಆಗಬೇಕೆ? ಅಥವಾ ಜಾಸ್ತಿ ಆಗಬೇಕೆ?
- ಸನ್ಯಾಸಿಗಳನ್ನು (ಪ್ರಪಂಚದೆಡೆಗಿನ ಸಂಬಂಧ ಕಳಚಿಕೊಂಡವರು) "ಮಹಾನ್ ಸಾಧಕರು" ಎಂದು ಕರೆಯುವುದು ಎಷ್ಟು ಸರಿ, ಯಾಕೆಂದರೆ ಬೇರೆ ಎಲ್ಲಾ ಪ್ರಾಣಿಗಳಿಗಿಂತ ಮಾನವ ಉನ್ನತ ಪ್ರಾಣಿಯಾಗಿದ್ದು ಭಾವನಿಗಳಿಂದ, ಅದನ್ನೆ ತೊರೆದರೆ?
- ಅನುಭವವಿರುವವನು ಅನುಭವಿ ಆದರೆ, ಭಾವನೆ ಇರುವವನು ಭಾವಿ ಆಗ್ತಾನಾ?
ವಿ.ಸೂ. :- ಯಾರಾದರೂ, ಈ ಕಾಲ್ಪನಿಕ ಕಥೆಗೆ, ಆಮೇಲಿರಿಸಿದ ಪ್ರಶ್ನೆಗಳಿಗೆ ಏನಾದರೂ ಅರ್ಥವಿದೆ ಎಂದು ಭಾವಿಸಿದರೆ, ನನಗೆ ಅಚ್ಚರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. :-)
3 comments:
chennagide. different aagide :)
thanks :-)
ಅದ್ಬುತ!!
ಯಾವುದು ಮೇಲು, ಯಾವುದು ಕೀಳು? ಅಂತ್ಯದಲ್ಲಿ ಮಾನವನ ಗುರಿ ಏನು?
Post a Comment