Monday, August 3, 2015


 ನವ ಜೋಡಿಯ ಜೀವನ
ಸಮುದ್ರ ತೀರದಂತೆ....
ಪ್ರೇಮ ಕಾಮನೆ ಅಲೆಗಳ ಅಬ್ಬರ....

ಕಾಲ ಕಳೆದಂತೆ ಸಂಬಂಧ ಮದ್ಯ ಸಾಗರಂತೆ
ಶಾಂತ, ಗಂಭೀರ, ಆಳ .... ಪ್ರೀತಿ

Friday, March 15, 2013

ಹೀಗೊಂದು ಗ್ಯಾಸ್ ಮಾಫಿಯಾ!


ನಿಮಗೆಲ್ಲ ತಿಳಿದಿರುವಂತೆ ಅಡಿಗೆ ಅನಿಲದ ಸಿಲಿಂಡರ್ ರೀಫಿಲ್ ಬುಕಿಂಗ್ ಈಗ IVRS ಮುಖಾಂತರ ಮಾಡಬಹುದು. ಬೆಂಗಳೂರಿನಲ್ಲಿ ಇದು ಕಡ್ಡಾಯ ಕೂಡ. ಗ್ಯಾಸ್ ಏಜನ್ಸಿಗೆ  ಫೋನ್ ಮಾಡಿದರೆ ಅಥವಾ ಅಲ್ಲಿಗೇ ಹೋದರೂ ಅಲ್ಲಿ ಬುಕಿಂಗ್ ಮಾಡಿಕೊಳ್ಳುವುದಿಲ್ಲ. IVRS ನಂಬರ್ ಕೊಟ್ಟು, ಇದಕ್ಕೆ ಕರೆ ಮಾಡಿ ಬುಕ್ ಮಾಡಿ ಅಂತಾರೆ.

ಈ IVRS ನಂಬರ್ ಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ರಿಜಿಸ್ಟರ್ ಮಾಡಿ, ನಿಮ್ಮ ಕಸ್ಟಮರ್ ನಂಬರ್ ಹೇಳಿ ಗ್ಯಾಸ್ ಬುಕಿಂಗ್ ಮಾಡಿದರಾಯಿತು. ಬುಕಿಂಗ್ ನಂಬರ್ ಹಾಗು ಬುಕಿಂಗ್ ಮಾಡಿದ ದಿನಾಂಕವನ್ನು  ರಿಜಿಸ್ಟರ್ ಮಾಡಿದ ಮೊಬೈಲ್ ನಂಬರ್ ಗೆ SMS ಮೂಲಕ ಕಳಿಸುತ್ತಾರೆ. ಸಿಲಿಂಡರ್ ಯಾವಾಗ ಡೆಲಿವರಿ ಆಗುತ್ತೆ ಮತ್ತು ಕ್ಯಾಶ್ ಮೆಮೊ (ರಶೀದಿ ) ನಂಬರ್, ಕೂಡ SMS ನಲ್ಲಿ ಬರುತ್ತೆ.

ಫೆಬ್ರವರಿ 13 ನೆ ತಾರೀಕು ನಮ್ಮ ಹೆಸರಿಗೆ ಸಿಲಿಂಡರ್ ಬುಕ್ ಆಗಿದೆ ಅಂತ  SMS ಬಂತು. ಫೆಬ್ರವರಿ 8 ನೆ ತಾರಿಕಷ್ಟೇ ನಾವು ಸಿಲಿಂಡರ್ ತೆಗೆದುಕೊಂಡಿದ್ದೆವು, ಅದೇ SMS ಮತ್ತೆ ಬಂದಿರಬಹುದೆಂದು ಸುಮ್ಮನಾದೆವು. ಫೆಬ್ರವರಿ 16 ನೆ ತಾರೀಕು ನಿಮ್ಮ ವಿಳಾಸಕ್ಕೆ ಸಿಲಿಂಡರ್ ಡೆಲಿವರಿ ಆಗಿದೆ ಅಂತಾನು  SMS  ಬಂತು!! ಅರ್ರೇ ನಮ್ಮನೆಗೆ  ಯಾವುದೇ ಸಿಲಿಂಡರ್ ಬಂದಿರಲಿಲ್ಲ!

ಫೆಬ್ರವರಿ 23 ನೆ ತಾರೀಕು ಮತ್ತೆ ನಮ್ಮ ಹೆಸರಿನಲ್ಲಿ ಸಿಲಿಂಡರ್ ಬುಕ್ ಆಗಿದೆ ಅಂತ  SMS ಬಂತು. ಗ್ಯಾಸ್ ಏಜನ್ಸಿ ಯವರೇ ನಮ್ಮ ಹೆಸರಿನಲ್ಲಿ ಗ್ಯಾಸ್ ಬುಕ್ ಮಾಡಿ, ಯಾರಿಗೋ ಮಾರಾಟ ಮಾಡ್ತಾ ಇದ್ದಾರೆ ಅಂತ ಅನುಮಾನ ಬಂತು. ಸರಿ ಮರುದಿನ ಗ್ಯಾಸ್ ಕಾರ್ಡ್, ಹಾಗು ಬುಕಿಂಗ್ ಡೀಟೇಲ್ಸ್ ಎಲ್ಲ ಹಿಡ್ಕೊಂಡು ಏಜನ್ಸಿ ಗೆ ಹೋದೆ. ಅಲ್ಲಿ ಕೇಳಿದರೆ ನೀವು ಬುಕ್ ಮಾಡಿದೀರಿ ನಿಮಗೆ ಡೆಲಿವೆರ್ ಆಗಿದೆ ಮೇಡಂ ಅಂತಾರೆ! ನಂಗೆ ಸಿಲಿಂಡರ್ ಬೇಡ ನಾನು ಬುಕ್ ಮಾಡಿಲ್ಲ ಯಾರೋ ಮಾಡ್ತಾ ಇದಾರೆ, ಎಲ್ಲಿಗೆ ಡೆಲಿವೆರ್ ಮಾಡಿದಿರಾ ಹೇಳಿ ಅಂದ್ರೆ ನೂರೆಂಟು ನೆಪ ಹೇಳಿ 1 ಗಂಟೆ ಮೇಲೆ ಬನ್ನಿ ಅಂತ ಹೇಳಿದ್ರು. ಡೆಲಿವೆರ್ ಬಾಯ್ ಗೆ ಫೋನ್ ಮಾಡಿ ಎಲ್ಲಿ ಕೊಟ್ಟಿದಿಯಪ್ಪ ಸಿಲಿಂಡರ್, ಕಸ್ಟಮರ್ ಬಂದು ಕೇಳ್ತಿದಾರೆ ಅಂತ ಕೇಳಿದ್ರು, ಅವ್ನು ಅಡ್ರೆಸ್ ಕನ್ಫ್ಯೂಸ್ ಆಗಿದೆ ಅವ್ರ ಮನೆ ಹತ್ರ ಹೋಗ್ತೀನಿ ಅಂದ! ಸರಿ ಅಂತ ಮನೆಗೆ ಬಂದೆ.

ನಾನು ಮನೆಗೆ ಬಂದು ಇನ್ನು 30  ನಿಮಿಷ ಆಗಿರಲಿಲ್ಲ ಡೆಲಿವೆರ್ ಬಾಯ್ ಬಂದ. ಮೇಡಂ ಅದು ಯಾರದ್ದೋ ಮನೆಗೆ ಅಡ್ಜಸ್ಟ್ ಮಾಡಿದ್ದೆ ಈಗ ನಿಮಗೆ ತಂದು ಕೊಡ್ತೀನಿ ಮೇಡಂ ಅಂದ! ಅಯ್ಯೋ ಕಥೆಯೆ ನಾನು ಬುಕ್ ಮಾಡೇ ಇಲ್ಲ ಯಾಕಪ್ಪ ಸಿಲಿಂಡರ್ ಇಳ್ಸ್ತಿಯಾ ಅಂತ ಕೇಳಿದಾಗ ಅವ್ನ ಮುಖದಲ್ಲಿ ಗಾಬರಿ ಕಾಣಿಸ್ತು. ಬಿಡಿಸಿ ಬಿಡಿಸಿ ಕೇಳಿದಾಗ ಅವ್ನೆ ಬುಕಿಂಗ್ ಮಾಡ್ಕೊಂಡು ಯಾರಿಗೋ ಡೆಲಿವೆರ್ ಮಾಡಿದಿನಿ ಅಂತ ಒಪ್ಕೊಂಡ.

ಅದ್ಕೆ ಅವ್ನು ಕೊಟ್ಟ ಸಮಜಾಯಿಷಿ ಮಾತ್ರ ಚೆನ್ನಾಗಿದೆ ನೋಡಿ. "ಈ ವರ್ಷಕ್ಕೆ ನಿಮಗೆ 5  ಸಬ್ಸಿಡಿ ಸಿಲಿಂಡರ್ ಇತ್ತಲ್ಲ ಮೇಡಂ ಅದ್ರಲ್ಲಿ ನೀವು  2 ಮಾತ್ರ ತಗೊಂಡಿದಿರಿ. ಇನ್ನು 1 ತಿಂಗಳಿಗೆ ಉಳಿದಿರೋ 3 ಲ್ಯಾಪ್ಸ್ ಆಗುತ್ತೆ. ಸುಮ್ನೆ govt. ಗೆ ಹೋಗುತ್ತೆ ಮೇಡಂ ಅದ್ಕೆ ಪಾಪ ಒಬ್ರದ್ದು ಸಬ್ಸಿಡಿ ಸಿಲಿಂಡರ್ ಎಲ್ಲ ಖಾಲಿ ಆಗಿತ್ತು ಅದ್ಕೆ ನಿಮ್ಮ ಹೆಸರಲ್ಲಿ ಬುಕ್ ಮಾಡಿ ಅವ್ರಿಗೆ ಕೊಟ್ಟೆ ಅಂದ!" ( ತುಂಬಾ ಕಾಳಜಿ ಅಂತ ಉಪಕಾರ ಮಾಡಿರೋ ರೀತಿಲಿ! )

ಕ್ಯಾಶ್ ಮೆಮೊ (ರಶೀದಿ) ಮೇಲೆ ಕಂಡೂ ಕಾಣದ ಅಕ್ಷರದಲ್ಲಿ subsidy consumed (2 /5 ) ಅಂತ ಬರೆದಿತ್ತು . ಇದನ್ನ ನೋಡಿಕೊಂಡು ಡೆಲಿವೆರ್ ಬಾಯ್ಸ್ ದುಡ್ಡು ಮಾಡಿಕೊಳ್ಳುತ್ತಾರೆ ಅಂತ ಅವನೇ ಹೇಳಿದ! ನೋಡಿ ಹೇಗಿದೆ!
ಅವನು, ಆಫೀಸ್ ನಲ್ಲಿ ಕಂಪ್ಲೇಂಟ್ ಮಾಡಬೇಡಿ ನನ್ನ ಸಂಬಳ ಕಟ್ ಆಗುತ್ತೆ, ಕಷ್ಟ ಇದೆ ಅನ್ತೆಲ್ಲ್ಲ ಹೇಳಿದ, ಜೊತೆಗೆ ಅವ್ನು ನಿಜ ಹೇಳಿದ್ದಕ್ಕೆ ಸ್ವಲ್ಪ 'ಪ್ರಾಮಾಣಿಕ ಕಳ್ಳ' ಅನಿಸಿ ಸುಮ್ಮನಾದೆ! HP ಗ್ಯಾಸ್ complaint ನಂಬರ್ ಗೆ ಫೋನ್ ಮಾಡಿ ಕಂಪ್ಲೇಂಟ್ ಮಾಡೋಕೆ ಟ್ರೈ ಮಾಡಿದ್ರೆ "your call can not be processed at this point of time!" ಅಂತ ಬರ್ತಾ ಇತ್ತು...

ಈ IVRS  ಸಿಸ್ಟಮ್ ನಲ್ಲಿ ಬುಕಿಂಗ್ ಮಾಡುವಾಗ ನೀವೇ ನಿಜವಾದ ಗ್ರಾಹಕ ಎಂದು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಇಲ್ಲ. ಯಾರೇ ಯಾವುದೇ ಫೋನ್ ನಿಂದ ಫೋನ್ ಮಾಡಿ ಗ್ರಾಹಕ ಸಂಖ್ಯೆ ಹೇಳಿ ಸಿಲಿಂಡರ್ ಬುಕ್ ಮಾಡಬಹುದು. ಬುಕಿಂಗ್ ಡೀಟೇಲ್ಸ್ ಮಾತ್ರ ರಿಜಿಸ್ಟರ್ಡ್ ಮೊಬೈಲ್ ನಂಬರ್ ಗೆ SMS ಮುಖಾಂತರ ಬರುತ್ತದೆ. ಈ ಲೋಪದೋಷವನ್ನು ದುರುಪಯೊಗಪಡಿಕೊಳ್ಳುತ್ತಿದ್ದಾರೆ ಕಳ್ಳರು. ಬುಕಿಂಗ್ ಮಾಡುವ ಮೊದಲು ಒಂದು secret PIN ಕೇಳುವ ವ್ಯವಸ್ಥೆ ಇದ್ದರೆ ಈ ಲೋಪದೋಷವನ್ನು ಸರಿಪಡಿಸಬಹುದು.

ಅವನು ಫೆಬ್ರವರಿ ತಿಂಗಳಿನಲ್ಲಿ ಹೀಗೆ ಮಾಡಿದ್ದರಿಂದ ನಮಗೇನು ನಷ್ಟ ಆಗ್ಲಿಲ್ಲ. ಅದೇ ಸೆಪ್ಟೆಂಬರ್, ಅಕ್ಟೋಬರ್ ನಲ್ಲೋ ಮಾಡಿದ್ದರೆ ನಮಗೆ ಸಬ್ಸಿಡಿ ದರದಲ್ಲಿ ಸಿಗಬೇಕಾಗಿದ್ದ ಸಿಲಿಂಡರ್ ಗೆ ಜಾಸ್ತಿ ದುಡ್ಡು ಕೊಟ್ಟು ತೆಗೆದುಕೊಳ್ಳುವ ಪ್ರಸಂಗ ಬರ್ತಿತ್ತು.  ಇಂತಹ ಮೋಸ ನೆಡಿತಿರುತ್ತೆ ಹುಷಾರಾಗಿರಿ!

Thursday, February 16, 2012

ನಮ್ಮನೆಯ ಪಾರಿ ......

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎಲ್ಲ ಮನೆಯ ಕಿಟಕಿಯಲ್ಲೂ ಪಾರಿವಾಳಗಳು ವಾಸ್ತವ್ಯ ಹೂಡಿರುತ್ತವೆ. ಹಾಗೆಯೆ ನಮ್ಮನೆಯ ಅಡಿಗೆ ಮನೆಯ ಕಿಟಕಿ ಹಾಗು ಬಚ್ಚಲ ಮನೆ ಕಿಟಕಿಯಲ್ಲಿ ದಿನದ ಇಪ್ಪತ್ನಾಕು ಗಂಟೆಯೂ ಕಪ್ಪು, ಬಿಳಿ ಹೀಗೆ ಒಂದಲ್ಲ ಒಂದು ಪಾರಿವಾಳ ಇದ್ದೆ ಇರುತ್ತದೆ.


ಬೆಳಿಗ್ಗೆ ೫ ಗಂಟೆಗೇ ಗೂಂ... ಗೂಂ... ಅಂತ ಕೂಗಲು ಶುರು, ಸ್ವಲ್ಪ ಹೊತ್ತಿಗೆ ಫೈಟಿಂಗ್ ಕೂಡ ಶುರು ಆಗುತ್ತೆ. ಒಂದಕ್ಕೊಂದು ಕೊಕ್ಕಿನಿಂದ ಕುಕ್ಕಿ ರೆಕ್ಕೆಯನ್ನು ಬಡಿಯುತ್ತ ನಮ್ಮ ನಿದ್ದೆಯನ್ನು ಹಾಳು ಮಾಡುತ್ತೆ! ಅದು ಜೋಡಿ ಪಾರಿವಾಳಗಳ ಫೈಟಿಂಗ್ ಗೋ ಅಥವಾ ಸರಸ-ಸಲ್ಲಪವೋ ನಮಗೆ ಇದುವರೆಗೂ ತಿಳಿದಿಲ್ಲ.!!!  :-)

 ಮೊದಮೊದಲು ಪಾರಿವಾಳಗಳನ್ನು ನೋಡಿದರೆ ನಂಗೆ ಸಿಟ್ಟು ಬರ್ತಿತ್ತು. ನಿದ್ದೆ ಮಾಡಕ್ಕೆ ಬಿಡಲ್ಲ, ಯಾವಾಗಲು ಕಿಟಕಿಯ ಗಾಜಿಗೆ ರೆಕ್ಕೆಯಿಂದ ಬಡಿಯುತ್ತ ಶಬ್ದ ಮಾಡುತ್ತೆ, ಆಗ ಉದುರುವ ರೆಕ್ಕೆಯ ಪುಕ್ಕ ಒಮ್ಮೊಮ್ಮೆ ಕಿಟಕಿ ತೆಗೆದಾಗ ಒಳಗೆ ಬರುತ್ತೆ ಛೀ...ಕೊಳಕು ಅಂತೆಲ್ಲ.. ಆದ್ರೆ ದಿನ ಕಳೆಯುತ್ತಾ ಅದು ಒಂಥರಾ ಇಷ್ಟ ಆಯಿತು! ಯಾವಾಗಲು ಮುಚ್ಚೆ ಇರ್ತಿದ್ದ ಕಿಟಕಿನ ತೆಗೆಯೋಕೆ ಶುರು ಮಾಡಿದೆ!

ಕಾಗೆಗಳಿಂದ ಬಚಾವಾಗಲು ಅವು ಮನುಷ್ಯರ ಸುತ್ತಮುತ್ತಾನೆ ಇರುತ್ತೆ. ಸುಮಾರು ಎಲ್ಲ ಸಣ್ಣ ಪಕ್ಷಿಗಳು ಕಾಗೆಗೆ ಹೆದರುತ್ತವೆ. ಪಾರಿವಾಳ ಕೂಡ. ಮನುಷ್ಯರನ್ನ ಕಂಡ್ರೆ ಅದಕ್ಕೆ ಭಯ ಇಲ್ಲ. ಮುಟ್ಟಲು ಹೋದರೆ ಮಾತ್ರ ಹಾರಿ ಹೋಗುತ್ತೆ.. ನಮ್ಮನೆ ಅಡುಗೆ ಮನೆಯ ಕಿಟಕಿಯ ಸರಳು ತುಂಬಾ ಚಿಕ್ಕದಿರುವುದರಿಂದ ಅದಕ್ಕೆ ಒಳಗೆ ಬರಲು ಸಾದ್ಯವಿಲ್ಲ, ಆದರೂ ಅಲ್ಲಿಂದ ಕುತ್ತಿಗೆಯನ್ನು ಮಾತ್ರ ಒಳಗೆ ಹಾಕಿ ಅಡುಗೆ ಮನೆಯನ್ನೆಲ್ಲ ನೋಡುತ್ತೆ. ಅದು ಹಾಗೆ ನೋಡುವುದನ್ನು ನೋಡಲು ಮಜಾ. ನಾನು ಅಡುಗೆ ಮನೆಯಲ್ಲಿ ಇಲ್ಲದ ಸಮಯ ನಿಧಾನ ಕತ್ತು ಒಳಗೆ ಹಾಕಿ ಪರಿವೀಕ್ಷಣೆ ನಡೆಸಿರುತ್ತೆ! :-) ಇದುವರೆಗೂ ಕಾಳು ಹಾಕುವ ಸಾಹಸ ಮಾಡಿಲ್ಲ. ಆದರೆ "ಪಾರಿ" ಎಂಬ ನಿಕ್ಕ್ ನೇಮ್ ಇಟ್ಟಿದೇವೆ. ದಿನಕ್ಕೊಮ್ಮೆ ಪಾರಿಯನ್ನು ಮಾತನಾಡಿಸುವುದನ್ನು ಮಿಸ್ ಮಾಡೋಲ್ಲ!