Saturday, June 4, 2011

ಕುಮಾರವ್ಯಾಸ ಭಾರತ - ಆದಿಪರ್ವ

ಶ್ರೀ ಎಲ್ ಗುಂಡಪ್ಪನವರು ಗದ್ಯಾನುವಾದಿಸಿದ ಕರ್ಣಾಟಕ ಭಾರತ ಕಥಾಮಂಜರಿಯ ಆದಿಪರ್ವವನ್ನು ಈಗಷ್ಟೇ ಓದಿ ಮುಗಿಸಿದೆ. ಕ್ರುಷ್ಣರ್ಜುನರು ಖಾಂಡವ ವನವನ್ನು ದಹಿಸಲು ಸಹಕರಿಸಿದ್ದು ಆಯಿತು. ನನ್ನನ್ನು ಕೆಲವು ಸಂದೇಹಗಳು ಕಾಡುತ್ತಿವೆ. ಭೀಷ್ಮನ ಪ್ರತಿಜ್ಞೆಯ ಬಗ್ಗೆ ತುಂಬಾ ಕಡಿಮೆ ವಿವರವಿದೆ. ಅಂಬೆ ಮತ್ತು ಸಾಲ್ವರ ಪ್ರೇಮದ ಮತ್ತು ಭೀಷ್ಮ ಸಾಲ್ವರ ಯುದ್ಧಗಳ ಉಲ್ಲೇಖವೇ ಇಲ್ಲ! ದ್ರೌಪದಿಯ ಸ್ವಯಂವರದವರೆಗೂ ಬಲರಾಮಕೃಷ್ಣರ ಹಾಗೂ ಪಾಂಡವರ ಭೇಟಿಯ ಬಗ್ಗೆ ಇಲ್ಲ. ನನ್ನ ಅರಿವಿನ ಪ್ರಕಾರ ಅರ್ಜುನನ ತೀರ್ಥಯಾತ್ರೆಯ ಸಮಯದಲ್ಲಿ ಶರಸೇತು ಬಂಧದ ಪ್ರಸಂಗ ಬರುವುದು. (ಅರ್ಜುನ ಮತ್ತು ಅಂಜನೆಯರ ಯುದ್ಧ.) ಇದರ ಬಗ್ಗೆಯೂ ಪ್ರಸ್ಥಾಪವಾಗಿಲ್ಲ. ಇದು ಮೂಲ ಕುಮಾರವ್ಯಾಸ ಭಾರತದಲ್ಲಿಲ್ಲವೋ ಅಥವಾ ಗದ್ಯಾನುವಾದದಲ್ಲಿಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ಈ ಬಗ್ಗೆ ವಿವರಿಸುತ್ತಾರೋ ಎಂದು ಕಾಡು ನೋಡಬೇಕಿದೆ.

1 comment:

ಮೃತ್ಯುಂಜಯ ಹೊಸಮನೆ said...

೧)ಭೀಷ್ಮನ ಪ್ರತಿಜ್ಞೆಯ ಬಗ್ಗೆ ಕುಮಾರವ್ಯಾಸನ ಚಿತ್ರಣ ಇಂತಿದೆ.
"ಆದರಿಲ್ಲಿಂ ಮೇಲೆ ನಾರಿಯ
ರಾದವರು ಭಾಗೀರಥಿಗೆ ಸರಿ
ಮೇದಿನಿಯ ಸಲಿಸುವೆನು ನಿನ್ನಯ ಮಗಳ ಮಕ್ಕಳಿಗೆ|
ಈ ದಿವಿಜರೀ ಹರಿಹರ ಬ್ರ
ಹ್ಮಾದಿ ದೇವರು ಸಾಕ್ಷಿ ಹೋಗೆಂ
ದಾ ದಯಾಂಬುಧಿ ನಗುತ ನಿನ್ನಯ ಮಗಳ ಕರೆಸೆಂದ||"
೨)ಸಾಲ್ವ ಮತ್ತು ಅಂಬೆಯ ನಡುವಿನ ಪ್ರೇಮದ ಬಗ್ಗೆ ಕುಮಾರವ್ಯಾಸ ಏನೂ ಬರೆದಿಲ್ಲ. ಸಾಲ್ವನ ಪ್ರಸ್ತಾಪವೇ ಇಲ್ಲ. ಭೀಷ್ಮ ಅಂಬೆಯನ್ನು ಮದುವೆಯಾಗಲು ನಿರಾಕರಿಸಿದ ಕೂಡಲೇ ಅಂಬೆ ಪರಶುರಾಮನ ಬಳಿಗೆ ಹೋಗುತ್ತಾಳೆ. ಪರಶುರಾಮ ಭೀಷ್ಮರ ನಡುವೆ ಸೋಲು ಗೆಲುವು ನಿರ್ಣಯವಾಗದ ಯುದ್ಧ.ಅಲ್ಲಿಂದ ತಪಕ್ಕೆ ಅಂಬೆಯ ಪ್ರಯಾಣ.
೩)ಕೃಷ್ಣನ ಹುಟ್ಟಿನ ಚಿತ್ರಣವನ್ನು ೧೨ ಸಾಲುಗಳಲ್ಲಿ ಮುಗಿಸಿದ ಅನಂತರ ಮತ್ತೆ ಆತನ ಪ್ರಸ್ತಾಪ ಬರುವುದು ದ್ರೌಪದಿಯ ಸ್ವಯಂವರದ ಸಂದರ್ಭದಲ್ಲಿ. ಅಷ್ಟೆ.
೪)ತೀರ್ಥಯಾತ್ರೆಯ ಸಮಯದಲ್ಲಿ ಕುಮಾರವ್ಯಾಸನ ಅರ್ಜುನ ಶರಸೇತುವೆಯನ್ನು ನೋಡುತ್ತಾನೆ.ಅಷ್ಟೆ.("ಕಂಡನು ಸೇತು ಬಂಧನವ"). ಹನುಮಂತ ಅರ್ಜುನರ ನಡುವಿನ ಯುದ್ಧದ ಬಗ್ಗೆ ಚಿತ್ರಣವಿಲ್ಲ.