Thursday, February 16, 2012

ನಮ್ಮನೆಯ ಪಾರಿ ......

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಎಲ್ಲ ಮನೆಯ ಕಿಟಕಿಯಲ್ಲೂ ಪಾರಿವಾಳಗಳು ವಾಸ್ತವ್ಯ ಹೂಡಿರುತ್ತವೆ. ಹಾಗೆಯೆ ನಮ್ಮನೆಯ ಅಡಿಗೆ ಮನೆಯ ಕಿಟಕಿ ಹಾಗು ಬಚ್ಚಲ ಮನೆ ಕಿಟಕಿಯಲ್ಲಿ ದಿನದ ಇಪ್ಪತ್ನಾಕು ಗಂಟೆಯೂ ಕಪ್ಪು, ಬಿಳಿ ಹೀಗೆ ಒಂದಲ್ಲ ಒಂದು ಪಾರಿವಾಳ ಇದ್ದೆ ಇರುತ್ತದೆ.


ಬೆಳಿಗ್ಗೆ ೫ ಗಂಟೆಗೇ ಗೂಂ... ಗೂಂ... ಅಂತ ಕೂಗಲು ಶುರು, ಸ್ವಲ್ಪ ಹೊತ್ತಿಗೆ ಫೈಟಿಂಗ್ ಕೂಡ ಶುರು ಆಗುತ್ತೆ. ಒಂದಕ್ಕೊಂದು ಕೊಕ್ಕಿನಿಂದ ಕುಕ್ಕಿ ರೆಕ್ಕೆಯನ್ನು ಬಡಿಯುತ್ತ ನಮ್ಮ ನಿದ್ದೆಯನ್ನು ಹಾಳು ಮಾಡುತ್ತೆ! ಅದು ಜೋಡಿ ಪಾರಿವಾಳಗಳ ಫೈಟಿಂಗ್ ಗೋ ಅಥವಾ ಸರಸ-ಸಲ್ಲಪವೋ ನಮಗೆ ಇದುವರೆಗೂ ತಿಳಿದಿಲ್ಲ.!!!  :-)

 ಮೊದಮೊದಲು ಪಾರಿವಾಳಗಳನ್ನು ನೋಡಿದರೆ ನಂಗೆ ಸಿಟ್ಟು ಬರ್ತಿತ್ತು. ನಿದ್ದೆ ಮಾಡಕ್ಕೆ ಬಿಡಲ್ಲ, ಯಾವಾಗಲು ಕಿಟಕಿಯ ಗಾಜಿಗೆ ರೆಕ್ಕೆಯಿಂದ ಬಡಿಯುತ್ತ ಶಬ್ದ ಮಾಡುತ್ತೆ, ಆಗ ಉದುರುವ ರೆಕ್ಕೆಯ ಪುಕ್ಕ ಒಮ್ಮೊಮ್ಮೆ ಕಿಟಕಿ ತೆಗೆದಾಗ ಒಳಗೆ ಬರುತ್ತೆ ಛೀ...ಕೊಳಕು ಅಂತೆಲ್ಲ.. ಆದ್ರೆ ದಿನ ಕಳೆಯುತ್ತಾ ಅದು ಒಂಥರಾ ಇಷ್ಟ ಆಯಿತು! ಯಾವಾಗಲು ಮುಚ್ಚೆ ಇರ್ತಿದ್ದ ಕಿಟಕಿನ ತೆಗೆಯೋಕೆ ಶುರು ಮಾಡಿದೆ!

ಕಾಗೆಗಳಿಂದ ಬಚಾವಾಗಲು ಅವು ಮನುಷ್ಯರ ಸುತ್ತಮುತ್ತಾನೆ ಇರುತ್ತೆ. ಸುಮಾರು ಎಲ್ಲ ಸಣ್ಣ ಪಕ್ಷಿಗಳು ಕಾಗೆಗೆ ಹೆದರುತ್ತವೆ. ಪಾರಿವಾಳ ಕೂಡ. ಮನುಷ್ಯರನ್ನ ಕಂಡ್ರೆ ಅದಕ್ಕೆ ಭಯ ಇಲ್ಲ. ಮುಟ್ಟಲು ಹೋದರೆ ಮಾತ್ರ ಹಾರಿ ಹೋಗುತ್ತೆ.. ನಮ್ಮನೆ ಅಡುಗೆ ಮನೆಯ ಕಿಟಕಿಯ ಸರಳು ತುಂಬಾ ಚಿಕ್ಕದಿರುವುದರಿಂದ ಅದಕ್ಕೆ ಒಳಗೆ ಬರಲು ಸಾದ್ಯವಿಲ್ಲ, ಆದರೂ ಅಲ್ಲಿಂದ ಕುತ್ತಿಗೆಯನ್ನು ಮಾತ್ರ ಒಳಗೆ ಹಾಕಿ ಅಡುಗೆ ಮನೆಯನ್ನೆಲ್ಲ ನೋಡುತ್ತೆ. ಅದು ಹಾಗೆ ನೋಡುವುದನ್ನು ನೋಡಲು ಮಜಾ. ನಾನು ಅಡುಗೆ ಮನೆಯಲ್ಲಿ ಇಲ್ಲದ ಸಮಯ ನಿಧಾನ ಕತ್ತು ಒಳಗೆ ಹಾಕಿ ಪರಿವೀಕ್ಷಣೆ ನಡೆಸಿರುತ್ತೆ! :-) ಇದುವರೆಗೂ ಕಾಳು ಹಾಕುವ ಸಾಹಸ ಮಾಡಿಲ್ಲ. ಆದರೆ "ಪಾರಿ" ಎಂಬ ನಿಕ್ಕ್ ನೇಮ್ ಇಟ್ಟಿದೇವೆ. ದಿನಕ್ಕೊಮ್ಮೆ ಪಾರಿಯನ್ನು ಮಾತನಾಡಿಸುವುದನ್ನು ಮಿಸ್ ಮಾಡೋಲ್ಲ!