Monday, December 7, 2009

ಕೋಲಾಟದ ವೀಡಿಯೋ

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಊರಿಗೆ ಹೋದಾಗ ತೆಗೆದ ವೀಡಿಯೋ. ಅದಕ್ಕೆ ಸಂಬಂಧಪಟ್ಟ ಲೇಖನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ.

Saturday, October 24, 2009

ದೀಪಾವಳಿಯ ಹಬ್ಬಾಡುವುದು ಮತ್ತು ಕೋಲಾಟ

"ಢುಮುಸಾsssಲ್ ಹೊಡಿರಣ್ಣ ಢುಮುಸಾsssಲ್ ಹೊಡಿರ್ರೊ"
"ಢುಮುಸಾsssಲ್ ಹೊಡಿರಣ್ಣ, ನಾವ್ ಹೋಗ ಮನೆಗೆsss" ...
...
"ಯದುಕುಲೇಸನೇsss, ಸ್ವಾಮಿ ಪರಸು ರಾಮನೇsss, ಸ್ವಾಮಿ ಪರಸು ರಾಮನೇsss"
...

ಇದೇನಂತ ಆಶ್ಚರ್ಯಗೊಳ್ತಾ ಇದೀರಾ? ಹಳ್ಳಿಗರಿಗೆ, ಅದರಲ್ಲೂ ಮಲೆನಾಡು ಸುತ್ತಮುತ್ತ ಅಂತೂ ಇದು ಏನು ಅಂತ ಕ್ಷಣಮಾತ್ರದಲ್ಲಿ ಗೊತ್ತಾಗುತ್ತದೆ. ಆದರೂ ಚಿಕ್ಕದಾಗಿ ವಿವರಿಸುತ್ತೇನೆ. ಗ್ರಾಂಥಿಕ ಭಾಷೆಯಲ್ಲಿ "ಅಂಟಿಗೆ ಪಿಂಟಿಗೆ" ಎಂದು ಕರೆಯುವ ಈ ಕಲೆಗೆ ಮಲೆನಾಡಿನ ಹೃದಯ ಭಾಗವಾದ ಸಾಗರ ಪ್ರಾಂತ್ಯದ ಸುತ್ತಮುತ್ತ "ಹಬ್ಬಾಡುವುದು" ಎನ್ನುತ್ತೇವೆ. ಹಬ್ಬಾಡುವವರು ದೀಪ ಹಿಡಿದುಕೊಂಡು ಮೊದಲೆರಡು ಸಾಲಿನಂತೆ ಕೂಗುತ್ತ ಮನೆಮನೆಗೆ ಬರುತ್ತಾರೆ, ಬಂದು ಹಾಡು ಆರಂಭಿಸುತ್ತಾರೆ. ಮನೆಯವರು, ಹಬ್ಬಾಡುವವರ ದೀಪಕ್ಕೆ ಎಣ್ಣೆ ಹಾಕಿ, ಅವರ ದೀಪದಿಂದ ತಮ್ಮ ಮನೆಯ ದೇವರ ದೀಪ ಹಚ್ಚಿಕೊಳ್ಳುವುದು ನಮ್ಮಲ್ಲಿ ಇರುವ ಪದ್ಧತಿ. ಅವರಿಗೆ ಹಬ್ಬಕ್ಕೆ ಮಾಡಿದ ಹೋಳಿಗೆಯನ್ನಿತ್ತು, ಸಂಭಾವನೆ ನೀಡುತ್ತೇವೆ. (ಮನೆ ಒಳಗಡೆ ಬಲ್ಬ್ ಹಾಳಾಗಿದ್ದರಿಂದ, ಫೋಟೋ ಸರಿಯಾಗಿ ಬಂದಿಲ್ಲ, ಹಬ್ಬಾಡುವ ಗುಂಪು ಹೊರಗಡೆ ಹಾಡು ಹೇಳುತ್ತಿದ್ದರು, ಅವರೆಲ್ಲ ಈ ಚಿತ್ರದಲ್ಲಿ ಮೂಡಿಬಂದಿಲ್ಲ)


ನಂಗೆ ತಿಳುವಳಿಕೆ ಬಂದು ಸುಮಾರು ೧೬-೧೮ ವರ್ಷಗಳಿಂದ ಪ್ರತಿ ದೀಪಾವಳಿಗೆ ಇದನ್ನು ಕೇಳುತ್ತಾ ಬಂದಿದ್ದೇನೆ. ಆದರೆ, ಇವತ್ತಿಗೂ ನಾನು ದೀಪಾವಳಿಯಂದು "ಹಬ್ಬಾಡುವವರು" ಬರುವುದನ್ನು ಕಾಯುತ್ತೇನೆ. ರಾತ್ರಿ ಮಲಗಿದ ವೇಳೆಯಲ್ಲಿ ಬಂದು ಎಬ್ಬಿಸುವ ಹಬ್ಬಾಡುವವರನ್ನು ನೋಡಲು, ಅವರು ಹೇಗೇ ಹಾಡನ್ನು ಹಾಡಲಿ (ಅಥವಾ ಹೇಳಲಿ), ಕೇಳಲು ನಂಗೆ ಚಂದ.

ನಮ್ಮೂರಲ್ಲಿ ಒಂದು ಪಂಗಡದವರು ಹಬ್ಬಾಡಿದರೆ, ಇನ್ನೊಂದು ಪಂಗಡದವರು ಕೋಲಾಟ ಆಡುತ್ತಾರೆ. ಅದು ದೀಪಾವಳಿಯ ಮರುದಿನ. ಎಲ್ಲರ ಮನೆಯೆದುರು ಕೋಲಾಟವಾಡುವುದು ರೂಢಿ. ಇವರಿಗೂ ಕೂಡ ಸ್ವಲ್ಪ ಸಂಭಾವನೆಯ ಜೊತೆಗೆ ಹೋಳಿಗೆಯನ್ನು ಕೊಟ್ಟರೆ, ನಮ್ಮ ಕೆಲಸ ಕೋಲಾಟವನ್ನು ನೋಡಿ ಸಂತೋಷಪಡುವುದಷ್ಟೆ. ಅದರಲ್ಲೂ ಕೋಲಾಟದ ಮಧ್ಯೆ ಎಸೆಯುವ ನಾಣ್ಯವನ್ನು ಅವರು ಕಾಲಿನಿಂದಲೇ ಹೆಕ್ಕಿಕೊಳ್ಳುವುದು ನೋಡಲು ಬಲು ಚಂದ. (ಇದರ ಬಗ್ಗೆ ಇನ್ನೊಂದು ಬ್ಲಾಗ್)


ಮೊನ್ನೆ ಹಬ್ಬಕ್ಕೆ ಊರಿಗೆ ಹೋದಾಗ ಹಬ್ಬಾಡುವುದು ಮತ್ತು ಕೋಲಾಟ ಎರಡೂ ಸಿಕ್ಕಿತು. :-) ವೀಡಿಯೋ ಮಾಡಿದ್ದೇನೆ.

Sunday, September 13, 2009

ಏಕೀ ವ್ಯತ್ಯಾಸ? ಏನೀ ವಿಪರ್ಯಾಸ?!

ನಮ್ಮ ದೇಹದ ಒಳಗೆ ಹೊರಗಿನ ಯಾವುದಾದರು ವಸ್ತು ಬಂದರೆ ಅದರೊಂದಿಗೆ ಹೋರಾಡಿ ಅದನ್ನು ಹೊರಹಕುತ್ತೆ. ಕಣ್ಣಿಗೆ ಧೂಳು ಹೋದ್ರೆ ಕಣ್ಣೀರಿನ ಜೊತೆ ಅದನ್ನ ಹೊರದಬ್ಬುತ್ತೆ. ಕಿವಿಗೆ ಏನಾದ್ರು ಹೋದ್ರು ಅಷ್ಟೆ ೫-೧೦ ನಿಮಿಷಕ್ಕೆ ತಾನಾಗೆ ಹೊರಬರುತ್ತೆ.

ಇನ್ನು ದೇಹದ ಒಳಗೆ ರೋಗಾಣುಗಳೆನದ್ರು ಹೊದ್ರೆ, ಬಿಳಿ ರಕ್ತ ಕಣಗಳು ಅದ್ರ ವಿರುದ್ದ ಹೋರಡಿ ಅದನ್ನ ಸಾಯಿಸಿ ಹಾಕುತ್ತೆ.
ಅಂದ್ರೆ, ತನ್ನದಲ್ಲದ ಯಾವುದೇ ವಸ್ತೂನು ತನ್ನಲ್ಲಿ ಇಟ್ಕೊಳೊಳ್ಳ ಅಂತಾಯ್ತು, ಒಂದೊಮ್ಮೆ ಅದ್ನ ಹೊರಗೆ ಹಾಕೊಕ್ಕೆ ಅಗ್ಲಿಲ್ಲ ಅಂದ್ಕೊಳಿ, ಅಗ ಮನುಷ್ಯ ಸಾಯೊ ಸಾಧ್ಯತೆ ಹೆಚ್ಚು. ಇದನ್ನ ಸ್ವಲ್ಪ ಆಳವಾಗಿ ಯೋಚನೆ ಮಾಡಿ ನೋಡಿ, ಇದರ ಹಿಂದೆ ಅದ್ಭುತವಾದ ತತ್ವ ,ಸಂದೇಶ ಇದೆ. ಒಂದು, ನಮ್ಮದಲ್ಲದ್ದನ್ನ ಇಟ್ಕೊಳ್ಳೊದು ತಪ್ಪ. ಇನ್ನೊಂದು, ಹಾಗೆ ಇಟ್ಕೊಂದ್ರೆ ಬದುಕೊ ಯೋಗ್ಯತೆ ಕಳ್ಕೊತೇವೆ!

ಇದು ಎಲ್ಲರಿಗೂ ಗೊತ್ತಿರೋ ಸತ್ಯ. ಆದ್ರೂ ಎಷ್ಟು ಜನ ತಮ್ಮದಲ್ಲದ ಹಣ, ಹೊನ್ನಿಗಾಗಿ ಬಡಿದಾಡ್ತಾರೆ? ಎಲ್ಲದು ನನಗೆ ಬೇಕು ಅನ್ನೊ ದುರಾಸೆಯಿಂದ ಜೀವನದ ಆನಂದವನ್ನೆಲ್ಲ ಹಾಳು ಮಾಡ್ಕೋತಾರೆ? ಬರಿ ಜೈವಿಕ ಕ್ರಿಯೆಯಿಂದ ದೇಹವು ಮಾಡುವ ಕೆಲಸವನ್ನ, ಬುದ್ಧಿವಂತಿಕೆ, ಚಿಂತನಾ ಶಕ್ತಿ, ಸ್ವಾಭಿಮಾನ ಎಲ್ಲ ಇರುವ ಮನುಷ್ಯ ಮಾಡಲಾರನೆ?

Wednesday, August 26, 2009

ದೇಹ, ಸಾವು ಮತ್ತು ಆತ್ಮ...

ಜ್ಞಾನಿಗಳು ಹೇಳ್ತಾರೆ ಜೀರ್ಣವಾಗಿರೊ ದೇಹವನ್ನು ಆತ್ಮ ತೊರೆದು ಹೋಗುವುದೇ ಸಾವು ಅಂತ. ಆತ್ಮ ಚಿರಾಯು ಸಾವು ಇರುವುದು ದೇಹಕ್ಕೆ ಮಾತ್ರ ಅಂತಾನು ಹೆಳ್ತಾರೆ. ಅದೇನೆ ಇರಲಿ..

ನಾನೇಕೆ ಸಾವು, ಆತ್ಮ ಅಂತೆಲ್ಲ ಮಾತಾದ್ತಿಡಿನಿ ಅಂದ್ರೆ, ಕಳೆದ ಕೆಲವು ದಿನಗಳ ಹಿಂದೆ ನಮ್ಮಜ್ಜಿ ತೀರಿಹೋದರು.ಅದೇ ದಿನ ನನ್ನ ಅಕ್ಕನ ಗೆಳತಿಯ ಮಗನೂ ರಸ್ತೆ ಅಪಘಾತದಲ್ಲಿ ಕೊನೆಉಸಿರೆಳೆದಿದ್ದ. ನಮ್ಮಜ್ಜಿಗೆ ೮೩ ವರ್ಷ ಆಗಿತ್ತು. ದೇಹ ಜೀರ್ಣ ಆಗಿತ್ತು ಅಂದುಕೊಳ್ಳಿ. ಆದರೆ ಆ ಹುಡುಗನ ವಯಸ್ಸು ಕೇವಲ ೧೯! ಈ ಸಾವನ್ನು ಸಮರ್ಥಿಸಿಕೊಳ್ಳುವುದು ಹೇಗೆ? ೧೯ ವರ್ಷಕ್ಕೆ ದೇಹ ಜೀರ್ಣವಾಗಿತ್ತಾ?!

ದೇಹ ಜೀರ್ಣವಾಗಲು ಕೇವಲ ವಯಸ್ಸು ಮಾತ್ರ ಕಾರಣ ಅಲ್ಲ ಅಂತ ಅರ್ಥೈಸಿಕೊಳ್ಳಬಹುದೇ? ಅಪಘಾತದಿಂದಾಗಿ ಅವನ ದೇಹ ಜೀರ್ಣವಾಗಿ ಆತ್ಮ ತೊರೆದು ಹೋಯಿತೆ? ಆದರು ನನಗಿರುವ ದ್ವಂದ್ವ ಏನೆಂದರೆ, ದೇಹದ ದೆಸೆಯಿಂದಾಗಿ ಆತ್ಮ ದೇಹವನ್ನು ತೊರೆಯುವುದೋ ಅಥವಾ ಆತ್ಮದ ಇಚ್ಚೆಯಂತೆ ದೇಹವು ಜರ್ಜರಿತವಾಗುವುದೋ?

Thursday, August 20, 2009

ಭಾವನೆಗಳ ಲೀಲೆ

ಅವನೊಬ್ಬ ಸ್ತಿತಪ್ರಜ್ಞ. ಯಾರೇನೇ ಹೇಳಲಿ, "ಓಹೋ, ಹೌದಾ, ಖುಷಿಯಾಯ್ತು", ಅಥವಾ "ಅಯ್ಯೋ, ಹಾಗಾಗಬಾರದಿತ್ತು" ಎಂದು ಹೇಳುತ್ತಿದ್ದ. ಹಾಗಂತ ಭಾವನೆಗಳಿಲ್ಲ ಅಂತಲ್ಲ, ಆದರೆ, ಇಲ್ಲವೇ ಇಲ್ಲನೆನ್ನುವಷ್ಟು ಕಡಿಮೆ ವ್ಯಕ್ತಪಡಿಸುತ್ತಿದ್ದ. ಅವನು ಏನಾದರೂ ಚಿಂತಿಸುತ್ತಿದ್ದರೆ, ಅಥವಾ ಖುಷಿಯಾಗಿದ್ದರೆ, ಅವನು ಹೇಳಿದರೆ ಮಾತ್ರ ಬೇರೆಯವರಿಗೆ ಗೊತ್ತಾಗುತ್ತಿತ್ತು.

ಎಲ್ಲರ ಜೀವನದಂತೆ, ಅವನ ಜೀವನದಲ್ಲೂ ಒಂದು ಹೆಣ್ಣು ಜೀವದ ಪ್ರವೇಶವಾಯಿತು. ಅವಳು "ನೀನೊಬ್ಬ ಮುಚ್ಚಿದ ಶೀಷೆ, ಮುಚ್ಚಳ ತೆಗೆದಿಡು, ನಿನ್ನನ್ನು ನೀನು ತೆರೆದಿಡಬೇಕು" ಎಂದಳು. "ಹೃದಯ ಸುಗಂಧ ದ್ರವ್ಯದ ಶೀಷೆ, ಮುಚ್ಚಳ ತೆಗೆದರೆ, ಅದರ ಪರಿಮಳ ಹೊರಟು ಹೋಗುತ್ತದೆ" ಎಂದ. "ಆದರೂ ಸ್ವಲ್ಪ ಸ್ವಲ್ಪ ತೆಗೆಯುವೆ, ಇನ್ನುಮುಂದೆ" ಎಂದ.

ಕಾಲಕ್ರಮೇಣ, ಗೊತ್ತೇ ಆಗದಂತೆ, ಭಾವನೆಗಳಿಗೆ ತಕ್ಕಷ್ಟು ಸ್ಪಂದಿಸಲು ಆರಂಭಿಸಿದ. ಮುಂಚೆ ಕಥೆ - ಕಾದಂಬರಿಗಳನ್ನು, ನಿರ್ಲಿಪ್ತನಾಗಿ, ಕೇವಲ ಆಸಕ್ತಿ, ಕುತೂಹಲ ಮತ್ತು ಕಥೆ ಎನ್ನುವ ದೃಷ್ಟಿಯಿಂದ ಮಾತ್ರ ಓದುತ್ತಿದ್ದವ, ಆಮೇಲೆ ಭಾವಪರವಶನಾಗಿ ಓದಲಾರಂಭಿಸಿದ. ದೂರದರ್ಶನ, ಚಲನಚಿತ್ರಗಳಲ್ಲಿ ಅಳುವ ದೃಶ್ಯವಿದ್ದರೆ, ಇಲ್ಲಿ ಇವನ ಕೆನ್ನೆಯ ಮೇಲೆ ಕಣ್ಣೀರು ಧಾರಾಕಾರ ಬರಲಾರಂಭಿಸಿತು. ಭಾವನೆಗಳ ಚಿಲುಮೆಯಾದ. ಅವನ ಚಿಂತಿತನಾಗಿದ್ದಾನೋ, ಖುಷಿಯಾಗಿದ್ದಾನೋ, ಅವನ ಮಿತ್ರರು ಹೇಳಬಲ್ಲವರಾಗಿದ್ದರು!

- ಅವನು ಮುಂಚೆ ಇದ್ದಿದ್ದು ಸರಿಯೇ? ಅಥವಾ ಆಮೇಲೆ ಪರಿವರ್ತನೆಗೊಂಡಿದ್ದು ಸರಿಯೇ?
- ಅಥವಾ ಎರಡೂ ಸರಿಯೇ!? ಇದೆಲ್ಲದರ ಮಿಶ್ರಿಣವೇ ಮಾನವ ಜೀವನವೇ?
- ಮನುಷ್ಯ ಪರಿಪೂರ್ಣವಾಗುವಡೆಗೆ ಎಂದರೇ, ಭಾವನೆಗಳು ಕಾಲಕ್ರಮೇಣ ಕಡಿಮೆ ಆಗಬೇಕೆ? ಅಥವಾ ಜಾಸ್ತಿ ಆಗಬೇಕೆ?
- ಸನ್ಯಾಸಿಗಳನ್ನು (ಪ್ರಪಂಚದೆಡೆಗಿನ ಸಂಬಂಧ ಕಳಚಿಕೊಂಡವರು) "ಮಹಾನ್ ಸಾಧಕರು" ಎಂದು ಕರೆಯುವುದು ಎಷ್ಟು ಸರಿ, ಯಾಕೆಂದರೆ ಬೇರೆ ಎಲ್ಲಾ ಪ್ರಾಣಿಗಳಿಗಿಂತ ಮಾನವ ಉನ್ನತ ಪ್ರಾಣಿಯಾಗಿದ್ದು ಭಾವನಿಗಳಿಂದ, ಅದನ್ನೆ ತೊರೆದರೆ?
- ಅನುಭವವಿರುವವನು ಅನುಭವಿ ಆದರೆ, ಭಾವನೆ ಇರುವವನು ಭಾವಿ ಆಗ್ತಾನಾ?

ವಿ.ಸೂ. :- ಯಾರಾದರೂ, ಈ ಕಾಲ್ಪನಿಕ ಕಥೆಗೆ, ಆಮೇಲಿರಿಸಿದ ಪ್ರಶ್ನೆಗಳಿಗೆ ಏನಾದರೂ ಅರ್ಥವಿದೆ ಎಂದು ಭಾವಿಸಿದರೆ, ನನಗೆ ಅಚ್ಚರಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. :-)

Monday, August 3, 2009

ಮನದ ಮಾತು...

August 2nd, 2009
ಪ್ರೀತಿಯ ಅಂಕುರಿಸಿ ಭಾವನೆಯ ಕವನವಾಗಿಸಿ
ಮುದನೀಡುವ ನಿನಗೆ ಹೇಳುವೆ ನಾನು ನಮನ

ಕನಸುಗಳ ಮೂಡಿಸಿ ಬದುಕ ಬೆಸೆಯುವ
ಇನಿಯನಿಗೆ ಕೋರುವೆ ಆಗಮನ

ಮನವ ಪುಳಕಿಸಿ ಆನಂದಿಸಿ ಬಾಳ ಪಯಣಕೆ
ಜೊತೆಯಾಗುವ ಸಂಗಾತಿಗೆ ಅರ್ಪಿಸುವೆ ಈ ಕವನ

ನಿನ್ನ ನೆನಪು..




My first poem, April 23rd,2009
ಮುಂಜಾವಿನ ಮಂಜಿನ ಮುಸುಕಿನಲಿ ಸೂರ್ಯನ
ಬೆಳಕಿಗೆಹೊಳೆಯುವ ಇಬ್ಬನಿಯಂತೆ ನಿನ್ನ ನೆನಪು ...

ಚೈತ್ರದ ಚಿಗುರಿಗೆ ಮೈದುಂಬಿ ಹಾಡುವ
ಹಕ್ಕಿಯಚಿಲಿಪಿಲಿ ದನಿಯಂತೆ ನಿನ್ನ ನೆನಪು ...

ಬೆಳದಿಂಗಳ ರಾತ್ರಿಯಲಿ ಮೈಚುಂಬಿಸುವ ತಂಗಾಳಿಯಲಿ
ತೇಲಿ ಬರುವ ಕಣಗಿಲೆ ಹೂವಿನ ಕಂಪಿನಂತೆ ನಿನ್ನ ನೆನಪು ...

Thursday, June 18, 2009

ರಾಮ ವಾಲಿಯನ್ನು ಮರೆಯಿಂದ ಕೊಂದಿದ್ದು ಸರಿ?

ಯಾರೇ ತನ್ನೆದುರಿಗೆ ಯುದ್ಧಕ್ಕೆ ಬಂದರೂ ಅವರ ಅರ್ಧ ಶಕ್ತಿ ತನಗೆ ಬರಬೇಕು ಎನ್ನುವ ವರವನ್ನು ವಾಲಿ ಪಡೆದಿದ್ದು ನಮಗೆ ಗೊತ್ತೇ ಇದೆ. ಅದಕ್ಕೆ ಅವನು ಸುಗ್ರೀವನ ಹೆಂಡತಿಯನ್ನು ಇಟ್ಟುಕೊಂಡರೂ ಸುಗ್ರೀವ ಅಸಹಾಯಕನಾಗಿ ರಾಮನ ಸಹಾಯ ಬೇಡಿದ. ರಾಮ ಒಪ್ಪಿ, ನೀವಿಬ್ಬರೂ ಹೊಡೆದಾಡುವಾಗ ನಾನು ಮರೆಯಲ್ಲಿ ನಿಂತು ವಾಲಿಯನ್ನು ಕೊಲ್ಲುತ್ತೇನೆ ಎಂದ. ಹಾಗೆಯೇ ಮಾಡಿದ ಕೂಡ.
ರಾಮ ಬಾಣವೇನೋ ಬಿಟ್ಟ. ವಾಲಿಗೆ ಪೆಟ್ಟಾಗಿ ಮರಣಶಯ್ಯೆಗೆ ಹೋದ. ರಾಮನನ್ನು ನೋಡಿ ವಾಲಿ ಹೇಳಿದ. "ನಾವು ಮೃಗಗಳು. ನಿಮ್ಮ ಹಾಗೆ ಮನುಷ್ಯರಲ್ಲ. ನಮ್ಮಲ್ಲಿ ನಿಮ್ಮ ಹಾಗೆ ಒಂದು ಹೆಣ್ಣಿಗೆ ಒಂದು ಗಂಡು ಅನ್ನುವ ನಿಯಮ ಇಲ್ಲ." ಪಶ್ಚಾತ್ತಾಪಗೊಂಡ ರಾಮ "ಹಾಗಾದರೆ ನಂಗೆ ಮುಂದಿನ ಜನ್ಮದಲ್ಲಿ ಹೀಗೆಯೇ ಸಾವು ಬರಲಿ" ಅಂದ. ಅದಕ್ಕೆ ಕೃಷ್ಣಾವತಾರದಲ್ಲಿ ಅರಳಿ ಮರದ ಕಟ್ಟೆಯ ಮೇಲೆ ಕೃಷ್ಣ ಕುಳಿತಾಗ ಅವನ ಕಾಲನ್ನು ನೋಡಿ, ಜಿಂಕೆ ಎಂದು ಪರಿಭವಿಸಿ, ಬೇಡನೊಬ್ಬ ಕೃಷ್ಣನಿಗೆ ಬಾಣಬಿಟ್ಟು, ಕೃಷ್ಣಾವತಾರ ಕೊನೆಗೊಳಿಸಿದ ಎಂದು ಮೇಧಾವಿಗಳು ವಿಶ್ಲೇಷಿಸುತ್ತಾರೆ.
ಇಲ್ಲೇ ಉದ್ಭವ ಆಯ್ತು ಒಂದು ಪ್ರಶ್ನೆ. ವಾಲಿ, ತಾನೇ ಹೇಳಿದ ತಾವು ಮೃಗಗಳು ನಾವು ಯಾರ ಹೆಂಡತಿಯನ್ನಾದರೂ ಇಟ್ಟುಕೊಳ್ಳಬಹುದು ಎಂದು. ಹಾಗಿದ್ದಲ್ಲಿ, ಮರೆಯಲ್ಲಿ ನಿಂತು ಒಂದು ಮೃಗಕ್ಕೆ ಬಾಣ ಹೊಡೆದದ್ದು ತಪ್ಪಲ್ಲವಲ್ಲ. ಅಥವಾ ಬೇಟೆಯ ನಿಯಮದ ಪ್ರಕಾರ ತಿನ್ನುವುದಾದಲ್ಲಿ ಮಾತ್ರ ಮರೆಯಿಂದ ಪ್ರಾಣಿ ಹತ್ಯೆ ಮಾಡಬಹುದೇ? ಆಮೇಲೇ, ಸರಿಯೇ ತಪ್ಪೇ, ವಾಲಿಯನ್ನು ಕೊಲ್ಲಬೇಕಾದರೆ, ಅವನಿಗೆ ಗೊತ್ತಾಗದಂತೆಯೇ ಕೊಲ್ಲಬೇಕಿತ್ತಲ್ಲ (ಅವನ ವರದ ದೆಸೆಯಿಂದ).
ಪಾಪ ಕೃಷ್ಣಾವತಾರದ ಕೃಷ್ಣ ಅನ್ನಿಸ್ತು ನಂಗೆ!

Saturday, June 6, 2009

ಧರ್ಮರಾಯನಿಗೆ ಶಿಕ್ಷೆ

ಯಮಧರ್ಮನ ವರಪ್ರಸಾದದಿಂದ ಜನಿಸಿದ ಯುಧಿಷ್ಠಿರ ತನ್ನ ಧರ್ಮ ಪಾಲನೆಯಿಂದ ಧರ್ಮರಾಯನೆಂದೇ ಕರೆಸಿಕೊಂಡದ್ದು ನಮಗೆಲ್ಲ ತಿಳಿದ ವಿಷಯ. ಆದರೂ ಅಶ್ವತ್ಥಾನ ಮೃತಹೊಂದಿದ ಎಂದು ಹೇಳಿದ್ದಕ್ಕೆ, ಧರ್ಮರಾಯನಿಗೆ ಒಂದು ದಿನ ನರಕವನ್ನು ನೋಡುವ ಶಿಕ್ಷೆ ವಿದಿಸಲಾಯಿತು ಎಂದು ಹೇಳುತ್ತಾರೆ. ಆ ಹೆಸರಿನ ಆನೆ ಒಂದು ನಿಜವಾಗಿ ಸತ್ತಿದ್ದರೂ, ಅದನ್ನು ಹೇಳಿದ ರೀತಿ ದ್ರೋಣಾಚಾರ್ಯರ ಮಗ ಅಶ್ವತ್ಥಾನನ ಮರಣದ ವಾರ್ತೆಯಂತಿತ್ತು. ಹೀಗಿದ್ದಾಗ ನನಗೊಂದು ಸಂದೇಹ. ಪಾಂಡವರ ಕೌರವರ ಜೋಜಿನಲ್ಲಿ ದ್ರೌಪದಿಯನ್ನೇ ಜೂಜಿಗಿಟ್ಟಿದ್ದಕ್ಕೆ, ಯಾಕೆ ಧರ್ಮರಾಯನಿಗೆ ಏನೂ ಶಿಕ್ಷೆಯ ಪ್ರಸ್ತಾಪ ಆಗಿಲ್ಲ?

/* ಈ ಪ್ರಶ್ನೆಗೆ ಉತ್ತರಿಸಲು ಎಲ್ಲರಿಗೂ ಆಹ್ವಾನವಿದೆ. */

Saturday, April 25, 2009

ಪ್ರೀತಿಯ ಹುಡುಗಿಯ ಪ್ರಥಮ ಕವಿತೆ ... ನಿನ್ನ ನೆನಪು ...

ಮುಂಜಾವಿನ ಮಂಜಿನ ಮುಸುಕಿನಲಿ ಸೂರ್ಯನ ಬೆಳಕಿಗೆ
ಹೊಳೆಯುವ ಇಬ್ಬನಿಯ ಹನಿಯಂತೆ ನಿನ್ನ ನೆನಪು ...

ಚೈತ್ರದ ಚಿಗುರಿಗೆ ಮೈದುಂಬಿ ಹಾಡುವ ಹಕ್ಕಿಯ
ಚಿಲಿಪಿಲಿ ದನಿಯಂತೆ ನಿನ್ನ ನೆನಪು ...

ಬೆಳದಿಂಗಳ ರಾತ್ರಿಯಲಿ ಮೈಚುಂಬಿಸುವ ತಂಗಾಳಿಯಲಿ
ತೇಲಿ ಬರುವ ಕಣಗಿಲೆ ಹೂವಿನ ಕಂಪಿನಂತೆ ನಿನ್ನ ನೆನಪು ...

- ರಂಜನಾ ( ಯಾರಂತ ಕೇಳ್ಬೇಡಿ!!! :-) )

- ಸ್ಪೂರ್ತಿಯ ಸೆಲೆ ಗೌತು !!!