ನಾನು ಸುಮಾರು ೫-೬ ವರ್ಷದವಳಾಗಿದ್ದಾಗ ನಮ್ಮ ಮನೆ ಇದ್ದದ್ದು ಹೊಸಗುಂದ ಎಂಬ ಹಳ್ಳಿಯಲ್ಲಿ. ಇದು ಶಿವಮೊಗ್ಗ ಜಿಲ್ಲೆಯ ಸಾಗರದಿಂದ ಸುಮಾರು ೧೫-೧೬ ಕಿ.ಮೀ. ದೂರದಲ್ಲಿ ಇದೆ. (ಸಾಗರ- ಶಿವಮೊಗ್ಗ ರಸ್ತೆಯಲ್ಲಿ). ಅದು ತುಂಬಾ ಕಾನನ ಪ್ರದೇಶ. ನಮ್ಮ ಮನೆಯ ಸುತ್ತ ಮುತ್ತ ದಟ್ಟ ಕಾಡೆ ಇತ್ತು. ಈ ಊರಿನಲ್ಲಿ ಇದ್ದದ್ದೇ ೪-೫ ಮನೆಗಳಿರಬಹುದು. ನಮ್ಮನೆಯಿಂದ ಇನ್ನೊಂದು ಮನೆ ಸುಮಾರು ಮುಕ್ಕಾಲು ಕಿ.ಮೀ. ಮದ್ಯ ಕಾಡು, ದೊಡ್ಡ ಕೆರೆ. ನನ್ನ ಶಾಲೆ ಸುಮಾರು ಎರಡು ಕಿ.ಮೀ. ಜೊತೆಗೂಡಿ ಹೋಗಲು ಯಾರು ಇಲ್ಲ, ಒಬ್ಬಳೇ ಹೋಗುವಷ್ಟು ದೊಡ್ದವಳಲ್ಲ. ಪ್ರತಿದಿನ ಅಪ್ಪನ ಜೊತೆ ಸೈಕಲ್ಲಿನಲ್ಲಿ ಶಾಲೆಗೆ ನನ್ನ ಪ್ರಯಾಣ. ಸಂಜೆ ಆಗುತ್ತಲೇ ಮನೆಯ ಹಿತ್ತಲಿಗೆ, ತೋಟಕ್ಕೆ ದಾಳಿ ಇಡುವ ಕಾಡು ಹಂದಿಗಳು, ಕಾಡು ಎಮ್ಮೆಗಳು.... ಹೀಗೆ ಈ ಹೊಸಗುಂದವನ್ನು ಒಂದು ಕುಗ್ರಾಮ ಅಂತ ನೀವು ಕಲ್ಪನೆ ಮಾಡಿಕೊಳ್ಳಬಹುದಿತ್ತು.
ಇಲ್ಲಿದ್ದ ಕಾಡಿನ ಮರಗಳು ತುಂಬಾ ಹಳೆಯ ಮರಗಳು ಎಂಬುದನ್ನ ಅದರ ಕಾಂಡದ ಗಾತ್ರ ಮತ್ತು ಎತ್ತರ ನೋಡಿದರೆ ಹೇಳಬಹುದಿತ್ತು. ಈ ಕಾಡಿನಲ್ಲಿ ಅನೇಕ ಸಸ್ಯ ಪ್ರಭೇದಗಳು, ಅನೇಕ ವಿಧದ ಹಾವುಗಳು, ಅನೇಕ ಕೀಟ, ಪಕ್ಷಿಗಳು ಕಾಣಸಿಗುತ್ತಿದ್ದವು. ಕೆಲವೊಂದು ಮರಗಳು "ಜೇನು ಮರ " ಎಂದೇ ಪ್ರಸಿದ್ದಿ ಆಗಿತ್ತು. ಈ ಮರದಲ್ಲಿ ದೊಡ್ಡ ದೊಡ್ಡ ಜೇನಿನ ತತ್ತಿಗಳನ್ನು ಕಾಣಬಹುದಿತ್ತು. ನಮ್ಮನೆ ಗದ್ದೆ ಮತ್ತು ತೋಟದ ಗಡಿಯನ್ನು ದಾಟಿದರೆ ಈ ಕಾಡು. ಈ ಕಾಡನ್ನು ಒಮ್ಮೆ ಪ್ರವೇಶಿಸಿದರೆ ಮತ್ತೆ ಹೊರಬರುವವರೆಗೆ ಬಿಸಿಲು ತಾಗುತ್ತಿರಲಿಲ್ಲ ಅಷ್ಟು ದಟ್ಟ ಕಾಡು. ಇಂತಹ ಕಾಡಿನಲ್ಲಿ ಒಂದು ಪಾಳುಬಿದ್ದ ದೇವಸ್ಥಾನ ಇತ್ತು. ನಮ್ಮನೆಗೆ ಯಾರದ್ರು ನೆಂಟರು ಬಂದಾಗ ಅಪ್ಪ ಅವರನ್ನ ಅಲ್ಲಿಗೆ ಕರೆದುಕೊಂಡು ಹೋಗಿ ದೇವಸ್ಥಾನ ತೋರಿಸುತ್ತಿದ್ದಿದ್ದುಂಟು. ಇದು ಮಾಮೂಲಿ ದೇವಸ್ಥಾನ ಆಗಿರಲಿಲ್ಲ. ಈ ದೇವಸ್ಥಾನದ ಸುತ್ತ ದೊಡ್ಡ ಅಗಳ (ಕಂದಕ) ಇತ್ತು. ನೋಡಿದರೆ ಕೋಟೆಯ ಅಗಳ ಅನ್ನುವಂತಿತ್ತು. ಒಂದು ಕಲ್ಯಾಣಿ ಕೂಡ ಇತ್ತು. ಮಳೆಗೆ ಕೊಚ್ಚಿಕೊಂಡು ಬರುವ ಮಣ್ಣು, ಮರದ ಎಲೆಯಿಂದ ಆ ಕಲ್ಯಾಣಿ ಮುಚ್ಚಿಹೋಗಿತ್ತು, ಆದರೆ ಕಲ್ಲು ಕಟ್ಟಿ ಮಾಡಿದ ಗುರುತು ಇರುವುದರಿಂದ ಕಲ್ಯಾಣಿ ಎಂದು ಹೇಳಬಹುದಿತ್ತು. ದೇವಸ್ಥಾನದ ಸುತ್ತ ಮುತ್ತ ಸುಮಾರು ಶಿಲಾ ಶಾಸನಗಳನ್ನ ಕಾಣಬಹುದಿತ್ತು. ಈ ದೇವಾಲಯದಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ, ಬಾಗಿಲಿನ ಚೌಕಟ್ಟು ಎನ್ನಬಹುದಾದ ಆಕಾರದ ಸುಂದರ ಕಲ್ಲಿನ ಕೆತ್ತಿನೆವುಳ್ಳ ಅವಶೇಷ ಕೂಡ ಇತ್ತು. ಅದರ ಸುತ್ತ ಮುತ್ತ ಸಹ ಶಾಸನಗಳು, ಸಣ್ಣ ಸಣ್ಣ ಕಲ್ಲಿನ ವಿಗ್ರಹಗಳು ನೋಡಸಿಗುತ್ತಿದ್ದವು. ಇದು ಯಾವುದೊ ಕಾಲದಲ್ಲಿ ರಾಜರ ಸಂಸ್ಥಾನವಾಗಿದ್ದಿರಬಹುದೆಂದು ಎಲ್ಲರೂ ಹೇಳುತ್ತಿದ್ದರು. ಆದರೆ ಅಲ್ಲಿರುವ ಶಿಲಾ ಶಾಸನವನ್ನು ಓದಿ ಅಧ್ಯಯನ ಮಾಡಲು ಯಾರು ಇರಲಿಲ್ಲ. ಲಿಪಿ ಅರ್ಥವಾಗುತ್ತಿರಲಿಲ್ಲ.
ಅಲ್ಲಿ ಓಡಾಡುವಾಗ ಯಾವುದಾದರು ಶಾಸನ ಕಾಲಿಗೆ ಎಡವಿದರೆ, ಅದನ್ನು ಎತ್ತಿ ನಿಲ್ಲುಸುವ ಕೆಲಸವನ್ನಂತೂ ನಮ್ಮಪ್ಪ ಹಾಗು ನಮ್ಮ ಮನೆಯವರು ಮಾಡಿದ್ದರು. ಗದ್ದೆಯಲ್ಲೋ ತೋಟದಲ್ಲೋ ಅಗೆಯುವಾಗ, ಕೆಲಸ ಮಾಡುವಾಗ ಸಿಕ್ಕಿರುವ ಭಗ್ನವಾಗಿರುವ ಕಲ್ಲಿನ ವಿಗ್ರಹಗಳನ್ನು ಸಂರಕ್ಷಿಸಿದ್ದಾರೆ. ನಮ್ಮನೆ ಮಾತ್ರ ಅಲ್ಲ ಈ ಊರಿನಲ್ಲಿ ಎಲ್ಲ ಕಡೆ ಈ ಥರ ವಿಗ್ರಹಗಳು, ಶಾಸನಗಳು ಕಾಣಸಿಗುತ್ತಿದ್ದವು. ತೋಟದಲ್ಲಿ, ಗದ್ದೆಯಲ್ಲಿ ಸಸಿ ನೆಡಲು ಅಗೆಯುವಾಗ ಕೆಲವರಿಗೆ ಬಂಗಾರದ ವಸ್ತುಗಳು ಕೂಡ ದೊರಕಿವೆ ಎಂಬ ವದಂತಿ ಇತ್ತು. ಎಷ್ಟು ನಿಜವೋ ಗೊತ್ತಿಲ್ಲ!! ಏನೆ ಇರಲಿ ಇದೆಲ್ಲದರಿಂದ ಇಲ್ಲಿ ರಾಜರ ಆಳ್ವಿಕೆ ಇತ್ತು ಎಂಬುದು ಸಾಬೀತಾಗುತ್ತದೆ.
ದೇವಸ್ಥಾನದ ಗರ್ಭ ಗುಡಿ ಖಾಲಿ ಇತ್ತು. ಆದರೆ ಗರ್ಭ ಗುಡಿಯ ಹೊರಗೆ ಒಂದು ನಂದಿಯ ವಿಗ್ರಹ ಹಾಗು ಮೆಟ್ಟಿಲಿನ ಎರಡೂ ಪಕ್ಕದಲ್ಲಿ ಒಂದೊಂದು ಆನೆ ಇದ್ದಿದನ್ನು ನೋಡಿದವರು ಇದ್ದಾರೆ. ಆದರೆ ಅದು ನಾನು ದೇವಸ್ಥಾನವನ್ನು ನೋಡುವ ಕಾಲಕ್ಕೆ ಮಾಯವಾಗಿತ್ತು. ಯಾವೊದೋ ಊರಿನವರು ಅದನ್ನು ಕದ್ದೊಯ್ದು ತಮ್ಮೂರಿನ ದೇವಸ್ಥಾನದಲ್ಲಿ ಇಟ್ಟಿದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು!! ಒಟ್ಟಾರೆ ಈ ದೇವಸ್ಥಾನ ಸುಮಾರು ೧೯೯೧-೯೨ ರಲ್ಲೇ ದೇವರಿಲ್ಲದ ಆಸ್ಥಾನವಾಗಿತ್ತು. ನಂದಿ ಇದ್ದದ್ದನ್ನು ನೋಡಿದವರು ಇದು ಶಿವನ ದೇವಾಲಯ ಅಂತ ಹೇಳುತ್ತಿದ್ದರು. ಈ ಮುಖ್ಯ ದೇವಾಲಯದ ಪಕ್ಕ ದಕ್ಷಿಣಕ್ಕೆ ಮುಖವಾಗಿರುವ ಇನ್ನೊಂದು ಪುಟ್ಟ ಗುಡಿ ಇತ್ತು. ಅದರಲ್ಲೂ ದೇವರು ಇರಲಿಲ್ಲ. ಜನ ತಮ್ಮ ತಮ್ಮ ಬುದ್ಧಿಗೆ ನಿಲುಕಿದಂತೆ ಯಾವ ದೇವರಿದ್ದಿರಬಹುದೆಂದು ಊಹೆ ಮಾಡುತ್ತಿದ್ದರು. ಮುಖ್ಯ ದೇವಾಲಯದ ದೇವರು ಶಿವ ಆಗಿರುವುದರಿಂದ ಈ ಗುಡಿ ಪಾರ್ವತಿಯದ್ದಾಗಿರಿತ್ತದೆ ಎಂಬುದು ಕೆಲವರ ವಾದವಾದರೆ ಇನ್ನು ಕೆಲವರು ಇದು ವೀರಭದ್ರನ ಗುಡಿ ಎಂದು ಹೇಳುತ್ತಿದ್ದರು.
ದೇವರಿಲ್ಲದೆ ಒಂದು ರೀತಿ ಹಾಳು ಬಿದ್ದಿದ್ದ ದೇವಾಲಯ, ಪ್ರಕೃತಿಯಿಂದಾಗಿ ಕೂಡ ಅವಸಾನದ ಹಾದಿ ಹಿಡಿದಿತ್ತು. ಮಲೆನಾಡಿನ ಮಳೆ ಹಾಗು ಸಿಡಿಲಿಗೆ ದೇವಾಲಯದ ಕೆಲವು ಆಧಾರ ಸ್ತಂಭಗಳು ಬಿರುಕು ಬಿಟ್ಟಿದ್ದರೆ, ಮರದ ದೊಡ್ಡ ದೊಡ್ಡ ಬೇರುಗಳು ದೇವಾಲಯದ ಅಡಿಗೆ ಹಾದು ಹೋಗಿ ಕಲ್ಲಿನ ಗೋಡೆಗಳನ್ನು ಶಿಥಿಲಗೊಳಿಸಿದ್ದವು. ಒಂದು ಮುಖ್ಯ ಆಧಾರ ಸ್ತಂಭವಂತೂ ಬೇರು ಒಳಹೊಕ್ಕಿದ ಪರಿಣಾಮವಾಗಿ ವಾಲಿಹೋಗಿತ್ತು. ಒಟ್ಟಾರೆ ಅವಸಾನದ ಹಾದಿಯಲ್ಲಿ ಇತ್ತು. ಆದರೂ ದೇವಸ್ಥಾನದ ಮೇಲ್ಛಾವಣಿಯ ಮೇಲಿದ್ದ ಕಲಾತ್ಮಕ ಕೆತ್ತನೆಗಳು, ಒಂದೇ ಕಲ್ಲಿನಿಂದ ಮಾಡಲ್ಪಟ್ಟ ರಂಗಸ್ಥಳ, ಕಲ್ಲಿನ ಗೋಡೆಗಳ ಮೇಲೆ ಇದ್ದ ಕೆತ್ತನೆಗಳು ದೇವಸ್ಥಾನದ ಅಂದವನ್ನು ಕಾಪಾಡಿತ್ತು.
ನಿಮಗೇ ತಿಳಿದಂತೆ ಭಾರತದ ಪುರಾತನ ವಿಗ್ರಹಗಳಿಗೆ ವಿದೇಶಗಳಲ್ಲಿ ನಾವು ಕಲ್ಪಿಸಿಕೊಳ್ಳಲು ಸಾಧ್ಯವಿರದಷ್ಟು ಬೆಲೆ ಇದೆ. ಇದನ್ನು ಅರಿತಿದ್ದ ಕೆಲವು ಶ್ರೀಮಂತರು, " ಆ ದೇವಸ್ಥಾನದ ಮುಖ್ಯ ಬಾಗಿಲನ್ನು (ವಾಸ್ತು ಬಾಗಿಲು) ಕೀಳಿಸಿಕೊಡುತ್ತಿರಾ ನಿಮಗೆ ದುಡ್ಡು ಕೊಡುತ್ತೇವೆ" ಎಂದು ಊರಿನವರನ್ನು ಕೇಳಿದವರೂ ಇದ್ದಾರೆ!! ಅದನ್ನು ಉದ್ಧಾರ ಮಾಡಲು ಆಗದೇ ಇದ್ದರೂ ಹಾಳು ಮಾಡುವ ಕೆಲಸವನ್ನಂತೂ ಮಾಡಬಾರದು ಎಂದು ನಂಬಿದವರು ಹಳ್ಳಿಯವರು. ಅದ್ದರಿಂದ ವಾಸ್ತು ಬಾಗಿಲು, ವಿಗ್ರಹಗಳು ದೇವಾಲಯದಲ್ಲೇ ಉಳಿದುಕೊಂಡವು.
ಕುಗ್ರಾಮವಾಗಿದ್ದ ಹೊಸಗುಂದ ಈಗ ಜಾಗತಿಕ ಮಟ್ಟದಲ್ಲಿ ಪ್ರಸಿದ್ದಿ ಆಗಿದೆ. ವಿದೇಶಿ ಪ್ರವಾಸಿಗರು, ವಿದೇಶಿ ವಿಶ್ವವಿದ್ಯಾನಿಲಯದ ಅಧ್ಯಯನ ತಂಡಗಳು ಇಲ್ಲಿಗೆ ಭೇಟಿನೀಡುತ್ತಿವೆ. ಕಾರಣ ಅನೇಕರ ಶ್ರದ್ಧೆ ಮತ್ತೆ ಶ್ರಮದ ಫಲವಾಗಿ ದೇವಾಲಯದ ಪುನರುತ್ಥಾನ ಕಾರ್ಯ ಆರಂಭ ಆಗಿದೆ. ಹೇಗೆ, ಏನು, ಇನ್ನೊಂದು ಭಾಗದಲ್ಲಿ ಬರೀತೀನಿ.
1 comment:
ಇಷ್ಟು ನಿಷ್ಟೆಯಿಂದ ದೇವಾಲಯವನ್ನು ಕಾಪಾಡಿಕೊಂಡು ಬಂದ ನಿಮ್ಮ ಊರವರನ್ನು ಪ್ರಶಂಸಿಸಬೇಕು..
Post a Comment