Wednesday, December 21, 2011

ಹೊಸಗುಂದದ ಇತಿಹಾಸ - ೨

ಈ ದೇವಾಲಯ ಇಲ್ಲಿನ ಜನರಿಗೆ ಮಾತ್ರ ತಿಳಿದಿತ್ತಾದರೂ, ಆಗೊಮ್ಮೆ ಈಗೊಮ್ಮೆ ಬೇರೆ ಬೇರೆ ವಿಶ್ವವಿದ್ಯಾನಿಲಯಗಳಲ್ಲಿ ಚರಿತ್ರೆ ಅಧ್ಯಯನ ಮಾಡುವ ವಿದ್ಯಾರ್ಥಿಗಳು, ವಾಸ್ತುಶಿಲ್ಪ ತಜ್ಞರು ಇಲ್ಲಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದುಂಟು. ಕೆಲವೊಂದು ಪತ್ರಿಕೆಗಳಲ್ಲಿ ವಾಸ್ತುಶಿಲ್ಪ ತಜ್ಞರು ಹೊಸಗುಂದದ ಬಗ್ಗೆ ಲೇಖನಗಳನ್ನು ಬರೆದದ್ದು ಇದೆ. ಆದರೆ ಇದು ಅಷ್ಟೇನೂ ಸುದ್ದಿ ಮಾಡಿರಲಿಲ್ಲ ಅಥವಾ ಮಹತ್ವವನ್ನು ಪಡೆದುಕೊಳ್ಳಲಿಲ್ಲ.


ಕಾರಣಾಂತರದಿಂದ ಅಪ್ಪ ಹೊಸಗುಂದದ ನಮ್ಮ ಜಮೀನನ್ನು ದಕ್ಷಿಣ ಕನ್ನಡ ಮೂಲದ ನಾರಾಯಣ ಶಾಸ್ತ್ರೀ ಎನ್ನುವವರಿಗೆ ಮಾರಿದರು. ಅವರು ಈ ದೇವಸ್ಥಾನದ ಪುನರುತ್ಥಾನದ ಕಾರ್ಯವನ್ನು ಆರಂಭಿಸಲು ಮುಂದಾದರು. ಅದಕ್ಕಾಗಿ ಒಂದು ಸಮಿತಿ ಕೂಡ ರಚನೆ ಆಯಿತು. ಸುಮಾರು ೨೦೦೦-೨೦೦೧ ರಿಂದಲೂ ಪುನರುತ್ಥಾನದ ರೂಪುರೇಷೆಗಳ ಮಾತುಕತೆ ಶುರು ಆಗಿತ್ತಾದರೂ, ೨೦೦೪-೦೫ ರ ಸಮಯದಲ್ಲಿ ಪುನರುತ್ಥಾನದ ಕಾರ್ಯ ಪ್ರಾರಂಭ ಆಗಿದೆ. ಈಗ ಪೂರ್ಣ ಪ್ರಮಾಣದಲ್ಲಿ ಕಾರ್ಯಸಾಗುತ್ತಿದೆ.


ಎಷ್ಟೇ ಮುಂದುವರಿದಿದ್ದರೂ ಈಗಲೂ ಹಳೆಯ ದೇವಾಲಯಗಳು, ಭಗ್ನವಾದ ವಿಗ್ರಹಗಳು ಅಂದರೆ ಜನ ಭಯಪಡುತ್ತಾರೆ. ಅದು ಹೇಗೆ ಅವಸನವಾಗಿತ್ತೋ, ಅದನ್ನು ನಾವು ಈಗ ಮುಟ್ಟಿದರೆ ನಮಗೆ ಎಲ್ಲಿ ಕೆಡಾಗುವುದೋ ಎಂಬ ಆತಂಕ ಜನಕ್ಕೆ. ಕೇರಳ ಹಾಗು ದಕ್ಷಿಣ ಕನ್ನಡದಲ್ಲಿ "ಅಷ್ಟಮಂಗಳ ಪ್ರಶ್ನೆ" ಎನ್ನುವ ಸಂಪ್ರದಾಯ/ ಪದ್ಧತಿ ಒಂದಿದೆ. ಇದು ಕೇರಳ ಹಾಗು ಗಡಿ ಭಾಗಗಳಲ್ಲಿ ತುಂಬಾ ಪ್ರಸಿದ್ದಿ ಪಡೆದಿದೆ ಮತ್ತು ಪ್ರಚಲಿತದಲ್ಲಿದೆ. ದಕ್ಷಿಣ ಕನ್ನಡದವರಾದ ಶಾಸ್ತ್ರೀಯವರು ಹೊಸಗುಂದದಲ್ಲಿ "ಅಷ್ಟಮಂಗಳ ಪ್ರಶ್ನೆ" ಕಾರ್ಯಕ್ರಮವನ್ನು ಏರ್ಪಡಿಸಿದರು. ಇದು ನಮ್ಮ ಕಡೆ ಹೊಸದಾದುದ್ದರಿಂದ ಇದನ್ನು ನೋಡಲು ಎಲ್ಲೆಲ್ಲಿಂದಲೋ ಜನ ಬಂದಿದ್ದರು.

ಅಷ್ಟಮಂಗಳ ನಡೆಸುವ ಜ್ಯೋತಿಷಿಗಳು ಅಥವಾ ಪಂಡಿತರ ಜೊತೆ ವಾಸ್ತುಶಿಲ್ಪ ತಜ್ಞರನ್ನು ಕೂಡ ಆಹ್ವಾನಿಸಲಾಗಿತ್ತು. ಇವರಿಬ್ಬರು ಜಂಟಿಯಾಗಿ ಅನೇಕ ಶಾಸನಗಳು, ವಿಗ್ರಹಗಳು, ಇಲ್ಲಿನ ಚರಿತ್ರೆಯನ್ನು ತೆರೆದಿಟ್ಟರು ಹಾಗು ಪುನರುತ್ಥಾನ ಮಾಡಿದರೆ ಮಂಗಳವಾಗುತ್ತದೆ, ಇದು ಮುಂದಿನ ದಿನಗಳಲ್ಲಿ ಕ್ಷೇತ್ರವಾಗಿ ಬೆಳೆಯುತ್ತದೆ ಎಂದು ಜನರ ಆತಂಕವನ್ನು ದೂರ ಮಾಡಿದರು. ಅಷ್ಟಮಂಗಳ ಪಂಡಿತರು ಕವಡೆ, ಹೂವುಗಳ ಸಹಾಯದಿಂದ ಏನೋ ಲೆಕ್ಕ ಹಾಕಿ " ಈ ದೇವಾಲಯದಿಂದ ಈ ದಿಕ್ಕಿನಲ್ಲಿ (ಉದಾಹರಣೆಗೆ ಪೂರ್ವ) ೪ ಫಾರ್ಲಂಗು ದೂರದಲ್ಲಿ ಮಣ್ಣಿನ ಕೆಳಗೆ ಒಂದು ಭಗ್ನ ವಾಗಿರುವ ವಿಗ್ರಹ ಮತ್ತು ಪಾಣಿಪೀಠ ಇದೆ, ವಿಗ್ರಹ ಮುಖ ಅಡಿಯಾಗಿ ಇದೆ, ..... ಹೀಗೆ... " ಎಂದು ಕೂತಲ್ಲೇ ಹೇಳುತ್ತಿದ್ದರೆ, ವಾಸ್ತುಶಿಲ್ಪ ತಜ್ಞರು ಅಲ್ಲಿ ಹೋಗಿ ಅಗೆದು ನೋಡಲು ಪ್ರಸನ್ನ ನಾರಾಯಣ ವಿಗ್ರಹ ದೊರೆಯಿತು. ಅದನ್ನು ನೋಡಿದ ನಾವು ನಿಜಕ್ಕೂ ಬೆರಗಾಗಿದ್ದೆವು. ಹೀಗೆ ಒಂದೊಂದೇ ವಿಗ್ರಹಗಳನ್ನೂ ಹೊರತೆಗೆದು, ದೊರೆತ ಶಾಸನಗಳಿಂದ ತಕ್ಕಮಟ್ಟಿನ ಮಾಹಿತಿ ದೊರೆಯಿತು. ಹಾಗೆಯೇ ನನ್ನ ಹಿಂದಿನ ಪೋಸ್ಟ್ ನಲ್ಲಿ ಹೇಳಿದ "ಅರ್ಧ ಕಿ.ಮೀ. ದೂರ ಇರುವ ಅವಶೇಷ" ಕಂಚಿ ಕಾಳಮ್ಮನ ದೇವಾಲಯ ಎಂದು ಸಂಶೋಧನೆ ಇಂದ ತಿಳಿದು ಬಂತು.

ಇಲ್ಲಿ ದೊರೆತಿರುವ ಮಾಹಿತಿಯ ಪ್ರಕಾರ ಸುಮಾರು ಕ್ರಿ. ಶ. ೧೧೦೦ ರಲ್ಲಿ ಹುಮ್ಚವನ್ನು (ತೀರ್ಥಹಳ್ಳಿಯ ಸಮೀಪ) ಆಳುತ್ತಿದ್ದ ಸಾಮಂತ ದೊರೆ ಹೊಸಗುಂದಕ್ಕೆ ಬಂದು ಆಳ್ವಿಕೆ ಶುರುಮಾಡಿದ. ಬಿಲ್ಲವೇಶ್ವರನ ಭಕ್ತರಾದ ಇವರು ಹೊಸಗುಂದದಲ್ಲೂ ಶಿವನ ದೇವಾಲಯವನ್ನು ನಿರ್ಮಿಸಿದರು. ಶಾಸನಗಳ ಪ್ರಕಾರ ಇವರು ಹೊಸಗುಂದವನ್ನು ಸುಮಾರು ೩೦೦ ವರ್ಷಗಳ ಕಾಲ ಆಳಿದರೆಂದು ಹೇಳಲಾಗುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಭುಜಬಲ ಹೊಸಗುಂದದ ಮೊದಲ ದೊರೆ ಎಂದು ಹೇಳಲಾಗುತ್ತಿದೆ. ಶಾಸನಗಳಲ್ಲಿ ದೊರೆತಿರುವ ಇನ್ನಿತರ ದೊರೆಗಳ ಹೆಸರು ಬೊಮ್ಮರಸ (ಕ್ರಿ. ಶ. ೧೧೫೨), ಕಾಳರಸ, ಬೀರರಸ (ಕ್ರಿ.ಶ. ೧೧೬೪-೧೧೯೪), ಬೊಮ್ಮರಸ-೨ (ಕ್ರಿ.ಶ ೧೧೯೪-೧೨೨೦), ಅಳಿಯ ಬೀರರಸ/ಹೊನ್ನಲ ದೇವಿ (ಕ್ರಿ.ಶ. ೧೨೨೦-೧೨೨೯), ಬಲದೇವ (ಕ್ರಿ.ಶ. ೧೨೨೯-೧೨೫೭)ಬೊಮ್ಮರಸ-೩ (ಕ್ರಿ.ಶ. ೧೨೫೭-೧೨೭೮), ಬೀರರಸ (ಕ್ರಿ.ಶ.೧೨೭೮-೧೨೮೩),ತಮ್ಮರಸ(ಕ್ರಿ.ಶ.೧೨೮೩-೧೨೮೮), ಸೊದ್ದಲದೇವ (ಕ್ರಿ.ಶ. ೧೨೮೮-೧೩೦೨), ಕೋಟಿನಾಯಕ ಮತ್ತು ಸೊಮೇ ನಾಯಕ (ಸುಮಾರು ಕ್ರಿ.ಶ.೧೩೦೨- ೧೩೨೦).

ಈಗ ದೇವಾಲಯದಲ್ಲಿ ಪ್ರಸನ್ನ ನಾರಾಯಣ, ಉಮಾಮಹೇಶ್ವರ, ಕಂಚಿ ಕಾಳಮ್ಮ ವಿಗ್ರಹಗಳನ್ನು ಪೂಜಿಸಲಾಗುತ್ತಿದೆ. ಜೀರ್ಣೋದ್ಧಾರ ಕಾರ್ಯ ನಡೆಯುತ್ತಿರುವುದರಿಂದ ವಿಗ್ರಹಗಳು ಮೂಲ ದೇವಾಲಯದ ಒಳಗೆ ಇಲ್ಲ. ಕಲ್ಯಾಣಿಯನ್ನು ಸ್ವಚ್ಛಗೊಳಿಸಿ ಸ್ವಲ್ಪ ಆಳ ತೋಡಿದ್ದರಿಂದ ಈಗ ಇದು ನೀರಿಂದ ತುಂಬಿದೆ. ಧರ್ಮಸ್ಥಳ ಮಂಜುನಾಥೇಶ್ವರ ಟ್ರಸ್ಟ್ ನವರು ಕೂಡ ಹೊಸಗುಂದದ ಪುನರುತ್ಥಾನಕ್ಕೆ ಕೈ ಜೋಡಿಸಿದ್ದಾರೆ. ರಾಮಚಂದ್ರಾಪುರ ಮಠದಿಂದಲೂ ಸಹಾಯ ಒದಗಿದೆ. ಹಾಗು ಸ್ಥಳೀಯರು ಕೂಡ ಕೈ ಜೋಡಿಸಿದ್ದಾರೆ. ಇಲ್ಲಿರುವ ಕಾಡನ್ನು ಸಂರಕ್ಷಿಸಲು ಇದನ್ನು "ದೇವರ ಕಾಡು" ಎಂದು ಘೋಷಿಸಿ, ಮರ ಕಡಿಯುವುದನ್ನು(ಕದಿಯುವುದನ್ನು!) ನಿಷೇಧಿಸಲಾಗಿದೆ. ಒಟ್ಟಾರೆ ಅವಸಾನದ ಹಾದಿಯಲ್ಲಿದ್ದ ಹೊಸಗಂದ ಪುನ:ಚೇತನಗೊಳ್ಳುತ್ತಿದೆ.

No comments: